ಅಮೆರಿಕ: ಕೇರಳ ಮೂಲದ ದಂಪತಿ, ಅವಳಿ ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Photo credit: indiatoday.in
ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಸ್ಯಾನ್ ಮ್ಯಾಟಿಯೊ ನಗರದಲ್ಲಿನ ತಮ್ಮ ನಿವಾಸದಲ್ಲಿ ಕೇರಳ ಕುಟುಂಬದ ನಾಲ್ವರು ಸದಸ್ಯರು ಫೆಬ್ರವರಿ 13ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಇದು ಹತ್ಯೆ-ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು indiatoday. in ವರದಿ ಮಾಡಿದೆ.
ಮೃತರನ್ನು ಆನಂದ್ ಸುಜಿತ್ ಹೆನ್ರಿ (42), ಆತನ ಪತ್ನಿ ಅಲೀಸ್ ಬೆಂಝಿಗರ್ (40) ಹಾಗೂ ನಾಲ್ಕು ವರ್ಷದ ಅವಳಿ ಪುತ್ರರು ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.
ಕುಟುಂಬವು ಅಲಮೇಡ ಡಿ ಇಯಾಸ್ ಪುಲ್ಗಾಸ್ನ 4100ನೇ ಬ್ಲಾಕ್ನಲ್ಲಿರುವ ಮನೆಯಲ್ಲಿ ವಾಸವಿದ್ದರು.
ದಂಪತಿ ವಾಸವಿದ್ದ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳಿಗೆ ಮನೆಯೊಳಕ್ಕೆ ಯಾವುದೇ ಬಲವಂತದ ಪ್ರವೇಶ ಕಂಡು ಬಾರದಿದ್ದರೂ, ಬೀಗ ಹಾಕದ ಕಿಟಕಿಯೊಂದು ಅವರ ಕಣ್ಣಿಗೆ ಬಿದ್ದಿದೆ. ಆ ಕಿಟಕಿಯ ಮೂಲಕ ಮನೆಯೊಳಗೆ ಪ್ರವೇಶಿಸಿದಾಗ, ಸ್ನಾನ ಗೃಹದಲ್ಲಿ ಇಬ್ಬರು ವಯಸ್ಕರು ಗುಂಡೇಟಿನ ಗಾಯಗಳಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಪಿಸ್ತೂಲ್ ಕಂಡು ಬಂದಿದೆ.
ಅವಳಿ ಬಾಲಕರ ಮೃತದೇಹಗಳು ಬೆಡ್ ರೂಂನಲ್ಲಿ ಪತ್ತೆಯಾಗಿದ್ದು, ಅವರ ಸಾವಿನ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಬಾಲಕರನ್ನು ಉಸಿರುಗಟ್ಟಿಸಿ ಅಥವಾ ಕತ್ತು ಹಿಸುಕಿ ಇಲ್ಲವೆ ವಿಷಪ್ರಾಶನ ಮಾಡಿಸಿ ಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದ್ದು, ಮೃತ ಬಾಲಕರ ದೇಹಗಳ ಮೇಲೆ ಯಾವುದೇ ದೈಹಿಕ ಗಾಯದ ಗುರುತುಗಳು ಕಂಡು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಲಯ ದಾಖಲೆಗಳ ಪ್ರಕಾರ, 2016ರಲ್ಲಿ ಆನಂದ್ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರಾದರೂ, ಅರ್ಜಿ ವಿಚಾರಣೆ ಇನ್ನೂ ಮುಕ್ತಾಯಗೊಂಡಿಲ್ಲ ಎಂದು ಹೇಳಲಾಗಿದೆ.
ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಹಾಗೂ ಈ ಸಾವುಗಳ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಲು ತನಿಖೆ ಪ್ರಗತಿಯಲ್ಲಿದೆ.
ಐಟಿ ಉದ್ಯೋಗಿಗಳಾಗಿದ್ದ ಆನಂದ್ ಹಾಗೂ ಅಲೀಸ್ ಇಬ್ಬರೂ ಕಳೆದ ಒಂಬತ್ತು ವರ್ಷಗಳಿಂದ ಅಮೆರಿಕಾದಲ್ಲಿ ವಾಸಿಸುತ್ತಿದ್ದರು. ಆನಂದ್ ತಂತ್ರಾಂಶ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಲೀಸ್ ಹಿರಿಯ ವಿಶ್ಲೇಷಕಿ ಹುದ್ದೆಯಲ್ಲಿದ್ದರು ಎಂದು ವರದಿಯಾಗಿದೆ.