ಭಾರತೀಯ ಮೂಲದ ಇತಿಹಾಸಗಾರ್ತಿ ಡಾ. ಮಣಿಕರ್ಣಿಕಾ ದತ್ತಾಗೆ ದೇಶ ತೊರೆಯುವಂತೆ ಸೂಚಿಸಿದ ಇಂಗ್ಲೆಂಡ್
ಭಾರತದಲ್ಲಿ ಸಂಶೋಧನೆಗೆ ಹೆಚ್ಚು ಸಮಯ ವ್ಯಯಿಸಿದ್ದಕ್ಕಾಗಿ ಗಡೀಪಾರು!

ಡಾ. ಮಣಿಕರ್ಣಿಕಾ ದತ್ತಾ (Photo: X/@DManikarnika)
ಲಂಡನ್ : ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕಿ, ಭಾರತೀಯ ಮೂಲದ ಇತಿಹಾಸಗಾರ್ತಿ ಡಾ. ಮಣಿಕರ್ಣಿಕಾ ದತ್ತಾ ಅವರು ಇಂಗ್ಲೆಂಡ್ನಿಂದ ಗಡೀಪಾರು ಭೀತಿಯನ್ನು ಎದುರಿಸುತ್ತಿದ್ದಾರೆ. ಭಾರತದಲ್ಲಿ ತನ್ನ ಸಂಶೋಧನೆಯನ್ನು ನಡೆಸಲು ಹೆಚ್ಚು ಸಮಯವನ್ನು ವ್ಯಯಿಸಿದ್ದಕ್ಕೆ ಇಂಗ್ಲೆಂಡ್ ಗೃಹ ಕಚೇರಿ ಡಾ. ಮಣಿಕರ್ಣಿಕಾ ದತ್ತಾ ಅವರಿಗೆ ದೇಶವನ್ನು ತೊರೆಯುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಮಣಿಕರ್ಣಿಕಾ ದತ್ತಾ(37) ಅವರು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸಕಾರರಾಗಿದ್ದಾರೆ. ಡಬ್ಲಿನ್ ಯೂನಿವರ್ಸಿಟಿ ಕಾಲೇಜ್ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಣಿಕರ್ಣಿಕಾ ದತ್ತಾ, ಭಾರತೀಯ ನಗರಗಳಲ್ಲಿನ ಇತಿಹಾಸವನ್ನು ಸಂಶೋಧನೆ ಮಾಡುತ್ತಿದ್ದಾರೆ. ಅವರಿಗೆ ಭಾರತದಲ್ಲಿ ನಗರಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯ ಅಗತ್ಯವಿದೆ. ಇದರಿಂದ ಅವರು ಆಗಾಗ್ಗೆ ಭಾರತಕ್ಕೆ ಪ್ರಯಾಣಿಸುತ್ತಿದ್ದರು.
ಇಂಗ್ಲೆಂಡ್ ಗೃಹ ಕಚೇರಿಯು, ಮಣಿಕರ್ಣಿಕಾ ದತ್ತಾ ಅಧ್ಯಯನಕ್ಕಾಗಿ ವಿದೇಶದಲ್ಲಿ ಹೆಚ್ಚು ದಿನಗಳನ್ನು ಕಳೆದ ಕಾರಣಕ್ಕೆ ಅವರನ್ನು ಬ್ರಿಟನ್ ತೊರೆಯುವಂತೆ ಹೇಳಿದೆ. 12 ವರ್ಷಗಳಿಂದ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದರೂ, ಆಕ್ಸ್ಫರ್ಡ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರೂ ಅವರ ವಿರುದ್ಧ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಅವರು ಯಾಕೆ ಗಡೀಪಾರು ಭೀತಿ ಎದುರಿಸುತ್ತಿದ್ದಾರೆ?
ಇಂಗ್ಲೆಂಡ್ ಗೃಹ ಕಚೇರಿ ನಿಯಮಾವಳಿಗಳ ಪ್ರಕಾರ, ಐಎಲ್ ಆರ್(ಇನ್ಡೆಫಿನೈಟ್ ಲೀವ್ ಟು ರಿಮೇನ್) ಅರ್ಜಿದಾರರು 10 ವರ್ಷಗಳ ಅವಧಿಯಲ್ಲಿ 548 ದಿನಗಳಿಗಿಂತ ಹೆಚ್ಚು ಕಾಲ ವಿದೇಶದಲ್ಲಿ ಇರುವಂತಿಲ್ಲ. ಆದರೆ, ದಿ ಗಾರ್ಡಿಯನ್ ವರದಿಯ ಪ್ರಕಾರ, ದತ್ತಾ ಅವರ ಒಟ್ಟು 691 ದಿನಗಳು ಇಂಗ್ಲೆಂಡ್ನಿಂದ ಹೊರಗಿದ್ದರು. ಇದರಿಂದಾಗಿ ಗೃಹ ಕಚೇರಿ ಅವರಿಗೆ ದೇಶದಲ್ಲಿ ವಾಸಿಸುವ ಹಕ್ಕನ್ನು ತಿರಸ್ಕರಿಸಿದೆ. ದತ್ತಾ ಅವರು 10 ವರ್ಷಗಳ ಹಿಂದೆ ಡಾ ಸೌವಿಕ್ ನಹಾ ಅವರನ್ನು ವಿವಾಹವಾಗಿ ಇಂಗ್ಲೆಂಡ್ನಲ್ಲಿ ನೆಲೆಸಿದರು. ಆದರೆ,Indian Historian From Oxford Faces Deportation ಇಂಗ್ಲೆಂಡ್ನಲ್ಲಿ ಕುಟುಂಬಿಕ ಜೀವನವನ್ನು ನಡೆಸುತ್ತಿಲ್ಲ ಎಂದು ಹೇಳಿಕೊಂಡು ಅವರಿಗೆ ಗಡೀಪಾರಿಗೆ ಮುಂದಾಗಿದೆ.
ಇನ್ಡೆಫಿನೈಟ್ ಲೀವ್ ಟು ರಿಮೇನ್ (ILR) ಎಂಬುವುದು ಬ್ರಿಟನ್ನಲ್ಲಿ ವಲಸೆ ಸ್ಥಿತಿಯಾಗಿದೆ. ಯಾವುದೇ ಸಮಯದ ನಿರ್ಬಂಧಗಳಿಲ್ಲದೆ ವ್ಯಕ್ತಿಗಳು ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ. ಇದು ಬ್ರಿಟಿಷ್ ಪೌರತ್ವಕ್ಕೆ ಒಂದು ಹಾದಿಯಾಗಿದೆ.
ಆಕ್ಸ್ಫರ್ಡ್ ಮತ್ತು ಬ್ರಿಸ್ಟಲ್ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ನಡೆಸಿರುವ ಮಣಿಕರ್ಣಿಕಾ ದತ್ತಾ, ಇಂಗ್ಲೆಂಡ್ ತೊರೆಯುವಂತೆ ಇಮೇಲ್ ಸ್ವೀಕರಿಸಿದ ನಂತರ ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದರು. ʼನಾನು ಬ್ರಿಟನ್ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದೇನೆ. 12 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ನಾನು ಸ್ನಾತಕೋತ್ತರ ಪದವಿ ಪಡೆಯಲು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಬಂದಾಗಿನಿಂದ ನನ್ನ ವಯಸ್ಕ ಜೀವನದ ಬಹುಪಾಲು ಯುಕೆಯಲ್ಲಿ ಕಳೆದಿದ್ದೇನೆ. ನನಗೆ ಈ ರೀತಿಯಾಗುತ್ತದೆ ಎಂದು ಎಂದಿಗೂ ಯೋಚಿಸಲಿಲ್ಲʼ ಎಂದು ಹೇಳಿದರು.
ದತ್ತಾ ಪರ ವಕೀಲ ನಾಗಾ ಕಾಂಡಿಯಾ ಪ್ರತಿಕ್ರಿಯಿಸಿ, ಭಾರತಕ್ಕೆ ದತ್ತಾ ಅವರ ಸಂಶೋಧನಾ ಪ್ರವಾಸಗಳು ಐಚ್ಛಿಕವಲ್ಲ, ಶೈಕ್ಷಣಿಕ ಮತ್ತು ಸಾಂಸ್ಥಿಕ ಜವಾಬ್ದಾರಿಗಳನ್ನು ಪೂರೈಸಲು ಇದು ಅತ್ಯಗತ್ಯ. ಇಲ್ಲವಾದಲ್ಲಿ ಅವರು ತಮ್ಮ ಪ್ರಬಂಧವನ್ನು ಪೂರ್ಣಗೊಳಿಸಲು ಅಥವಾ ವೀಸಾ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ದತ್ತಾ ಅವರು ಸೆಪ್ಟೆಂಬರ್ 2012ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಇಂಗ್ಲೆಂಡ್ಗೆ ತೆರಳಿದರು. ಆ ಬಳಿಕ ಇಂಗ್ಲೆಂಡ್ನಲ್ಲಿ ವಿವಾಹವಾಗಿ ʼಸಂಗಾತಿ ವೀಸಾʼವನ್ನು ಪಡೆದರು. ಸುದೀರ್ಘ ನಿವಾಸಿ ಎಂಬ ಆಧಾರದ ಮೇಲೆ ಕಳೆದ ವರ್ಷ ಅಕ್ಟೋಬರ್ನಲ್ಲಿ ಯುಕೆಯಲ್ಲಿ ಉಳಿಯಲು ಅವರು ಅರ್ಜಿ ಸಲ್ಲಿಸಿದ್ದರು. ಆಕೆಯ ಪತಿಯ ಅರ್ಜಿಯನ್ನು ಅನುಮೋದಿಸಲಾಯಿತು, ಆದರೆ ಆಕೆಯ ಅರ್ಜಿಯನ್ನು ನಿರಾಕರಿಸಲಾಗಿದೆ.
ನೀವು ಈಗ ಇಂಗ್ಲೆಂಡ್ ಅನ್ನು ತೊರೆಯಬೇಕು. ಇಲ್ಲವಾದಲ್ಲಿ 10 ವರ್ಷ ಮರು ಪ್ರವೇಶ ನಿಷೇಧಕ್ಕೆ ಒಳಪಡಬಹುದು ಮತ್ತು ಹೆಚ್ಚು ವಾಸಿಸಿದ್ದಕ್ಕಾಗಿ ಕಾನೂನು ಕ್ರಮಕ್ಕೆ ಒಳಪಡಬಹುದು ಎಂದು ಗೃಹ ಕಚೇರಿಯು ತಿಳಿಸಿದೆ. ಆದರೆ, ದತ್ತಾ ಅವರನ್ನು ಯುಕೆಯಿಂದ ಗಡೀಪಾರು ಮಾಡುವ ಗೃಹ ಕಚೇರಿಯ ನಿರ್ಧಾರದ ವಿರುದ್ಧ ದತ್ತಾ ಅವರ ವಕೀಲರು ಕಾನೂನು ಹೋರಾಟ ಪ್ರಾರಂಭಿಸಿದ್ದಾರೆ. ಆಕ್ಸ್ಫರ್ಡ್ ಇತಿಹಾಸಗಾರ್ತಿಗೆ ಸಹೋದ್ಯೋಗಿಗಳ ಬೆಂಬಲ ಕೂಡ ವ್ಯಕ್ತವಾಗಿದೆ.
ಗ್ಲಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಉಪನ್ಯಾಸಕರಾಗಿರುವ ಅವರ ಪತಿ ಈ ಕುರಿತು ಪ್ರತಿಕ್ರಿಯಿಸಿ, ʼಗೃಹ ಕಚೇರಿಯ ಈ ನಿರ್ಧಾರದಿಂದ ನಮ್ಮಿಬ್ಬರಿಗೆ ಒತ್ತಡ ಉಂಟಾಗಿದೆ. ಇದು ಮಾನಸಿಕವಾಗಿ ಘಾಸಿಗೊಳಿಸಿದೆ. ನಾನು ಕೆಲವೊಮ್ಮೆ ಈ ಸಮಸ್ಯೆಗಳ ಬಗ್ಗೆ ಉಪನ್ಯಾಸಗಳನ್ನು ನೀಡುತ್ತೇನೆ ಮತ್ತು ಈ ಬಗ್ಗೆ ಲೇಖನಗಳನ್ನು ಓದಿದ್ದೇನೆ, ಆದರೆ ನಮಗೆಯೇ ಈ ರೀತಿ ಆಗುತ್ತದೆ ಎಂದು ಎಂದಿಗೂ ಯೋಚಿಸಲಿಲ್ಲʼ ಎಂದು ಹೇಳಿದರು.