ಶ್ವೇತಭವನದ ಮೇಲೆ ದಾಳಿಗೆ ಯತ್ನ: ಭಾರತೀಯ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ ಎಂಟು ವರ್ಷ ಜೈಲು ಶಿಕ್ಷೆ

Photo | NDTV
ವಾಷಿಂಗ್ಟನ್: ಶ್ವೇತಭವನದ ಮೇಲೆ ದಾಳಿ ಮಾಡಲು ಯತ್ನಿಸಿದ ಆರೋಪದ ಮೇಲೆ ಗುರುವಾರ ಭಾರತೀಯ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
2023ರ ಮೇ 22ರಂದು ಬಾಡಿಗೆ ಟ್ರಕ್ ಬಳಸಿ ಸಾಯಿ ವರ್ಷಿತ್ ಕಂದುಲಾ(20) ಶ್ವೇತಭವನದ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಅಮೆರಿಕದ ಚುನಾಯಿತ ಸರಕಾರವನ್ನು ಉರುಳಿಸಿ ನಾಝಿ ಸಿದ್ದಾಂತದ ಸರ್ವಾಧಿಕಾರಿ ಸರಕಾರ ಸ್ಥಾಪಿಸುವ ಗುರಿಯಿಂದ ಈತ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಅಮೆರಿಕದ ನ್ಯಾಯ ಇಲಾಖೆ ತಿಳಿಸಿದೆ.
2024ರ ಮೇ.13ರಂದು ಸಾಯಿ ವರ್ಷಿತ್ ಕಂದುಲಾ ಈ ಕುರಿತು ತಪ್ಪೊಪ್ಪಿಕೊಂಡಿದ್ದ. ಹೈದರಾಬಾದ್ ನ ಚಂದನಗರದಲ್ಲಿ ಜನಿಸಿದ್ದ ಸಾಯಿ ವರ್ಷಿತ್ ಕಂದುಲಾ ಗ್ರೀನ್ ಕಾರ್ಡ್ ಹೊಂದಿರುವ ಯುಎಸ್ ನ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿದ್ದಾನೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, 2023ರ ಮೇ 22ರಂದು ಮಧ್ಯಾಹ್ನ ಮಿಸೌರಿಯ ಸೇಂಟ್ ಲೂಯಿಸ್ ನಿಂದ ವಾಷಿಂಗ್ಟನ್ ಡಿ.ಸಿ.ಗೆ ವಾಣಿಜ್ಯ ವಿಮಾನದಲ್ಲಿ ಬಂದಿದ್ದ ವರ್ಷಿತ್, ಸಂಜೆ 6:30ಕ್ಕೆ ಟ್ರಕ್ ವೊಂದನ್ನು ಬಾಡಿಗೆಗೆ ಪಡೆದಿದ್ದ. ಅಲ್ಲಿಂದ ನೇರವಾಗಿ ಶ್ವೇತಭವನದ ಬಳಿ ಹೋಗಿ ತಡೆಗೋಡೆಗೆ ಡಿಕ್ಕಿ ಹೊಡೆದು ದಾಂಧಲೆ ನಡೆಸಿದ್ದಾನೆ. ಘಟನೆ ಬೆನ್ನಲ್ಲೇ ವಾಷಿಂಗ್ಟನ್ ಪೊಲೀಸರು ವರ್ಷಿತ್ ಕಂದುಲಾನನ್ನು ಬಂಧಿಸಿದ್ದರು.