ಐವರು ಮಹಿಳೆಯರ ಅತ್ಯಾಚಾರ ಪ್ರಕರಣ: ಬಿಜೆಪಿ ಜೊತೆ ನಿಕಟವಾಗಿ ಗುರುತಿಸಿಕೊಂಡಿದ್ದ ಭಾರತೀಯ ಮೂಲದ ವ್ಯಕ್ತಿಗೆ ಆಸ್ಟ್ರೇಲಿಯಾದಲ್ಲಿ 40 ವರ್ಷ ಜೈಲು ಶಿಕ್ಷೆ

ಬಾಳೇಶ್ ಧನಕರ್ (Photo: Facebook)
ಸಿಡ್ನಿ : ಕೊರಿಯಾದ ಐವರು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಮೂಲದ ಬಾಳೇಶ್ ಧನಕರ್ ಎಂಬಾತನಿಗೆ ಆಸ್ಟ್ರೇಲಿಯಾದಲ್ಲಿ 40 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ ಬಿಜೆಪಿಯ ಸಾಗರೋತ್ತರ ಆಸ್ಟ್ರೇಲಿಯ ಘಟಕದ ಸ್ಥಾಪಕನಾಗಿದ್ದಾನೆ ಎಂದು ತಿಳಿದು ಬಂದಿದೆ.
ಅಮಲು ಪದಾರ್ಥ ನೀಡಿ ಅತ್ಯಾಚಾರ, ಒಪ್ಪಿಗೆಯಿಲ್ಲದೆ ವೀಡಿಯೊ ಚಿತ್ರೀಕರಣ, ಹಲ್ಲೆ ಸೇರಿದಂತೆ 39 ಅಪರಾಧಗಳಿಗೆ ಸಂಬಂಧಿಸಿ ಬಾಳೇಶ್ ಧನಕರ್ ಗೆ ಈ ಶಿಕ್ಷೆಯನ್ನು ವಿಧಿಸಲಾಯಿತು. 2023ರ ಎಪ್ರಿಲ್ನಲ್ಲಿ ಸಿಡ್ನಿ ನ್ಯಾಯಾಲಯ ಎಲ್ಲಾ ಪ್ರಕರಣಗಳಲ್ಲಿ ಬಾಳೇಶ್ ಧನಕರ್ ತಪ್ಪಿತಸ್ಥ ಎಂದು ಘೋಷಿಸಿದೆ.
ಕೊರಿಯನ್ನಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡುವವರು ಬೇಕಾಗಿದ್ದಾರೆ ಎಂದು ಈತ ನಕಲಿ ಜಾಹೀರಾತು ನೀಡುತ್ತಿದ್ದ. ಈತನನ್ನು ಸಂಪರ್ಕಿಸುತ್ತಿದ್ದ ಮಹಿಳೆಯರನ್ನು ಸಿಡ್ನಿಯ ಹಿಲ್ಟನ್ ಹೋಟೆಲ್ನಲ್ಲಿರುವ ಬಾರ್ನಲ್ಲಿ ಭೇಟಿಯಾಗುತ್ತಿದ್ದ. ಬಳಿಕ ಹೋಟೆಲ್ ಅಥವಾ ಪಕ್ಕದಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ಮಹಿಳೆಯರಿಗೆ ಮಾದಕವಸ್ತುಗಳನ್ನು ನೀಡಿ ಅತ್ಯಾಚಾರ ಎಸಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತನ ಅಪರಾಧ ಕೃತ್ಯದ ಕುರಿತು ವೀಡಿಯೊ ಪುರಾವೆಗಳನ್ನು ಕೂಡ ಪೊಲೀಸರು ತನಿಖೆಯ ವೇಳೆ ಪತ್ತೆ ಹಚ್ಚಿದ್ದಾರೆ.
2006ರಲ್ಲಿ ಆಸ್ಟ್ರೇಲಿಯಾಕ್ಕೆ ವಿದ್ಯಾರ್ಥಿಯಾಗಿ ತೆರಳಿದ ಧನಕರ್, ಭಾರತೀಯ-ಆಸ್ಟ್ರೇಲಿಯನ್ ಸಮುದಾಯದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದಲ್ಲದೆ ಆಸ್ಟ್ರೇಲಿಯಾದ ಹಿಂದೂ ಕೌನ್ಸಿಲ್ನ ವಕ್ತಾರನಾಗಿ ಕಾರ್ಯನಿರ್ವಹಿಸಿದ್ದ. 2014ರಲ್ಲಿ ಸಿಡ್ನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತ ಕಾರ್ಯಕ್ರಮ ಆಯೋಜಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದು ಬಂದಿದೆ.