ಮಲೇಶ್ಯಾದಲ್ಲಿ ಪ್ರತಿದಿನ ವಿಮಾನದ ಮೂಲಕ ಕಚೇರಿಗೆ ತೆರಳಿ ಹಣ ಉಳಿಸುವ ಭಾರತೀಯ ಮೂಲದ ಮಹಿಳೆ!

Photo | timesofindia
ಕೌಲಾಲಂಪುರ: ಪ್ರಪಂಚದಾದ್ಯಂತ ಜನರು ಕೆಲಸಕ್ಕಾಗಿ ಬಸ್ ಗಳು, ಮೆಟ್ರೋಗಳು, ಕ್ಯಾಬ್ ಗಳ ಮೂಲಕ ತೆರಳುತ್ತಾರೆ. ಟ್ರಾಫಿಕ್ ಜಾಮ್, ವಾಹನಗಳ ಅಲಭ್ಯತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿಕೊಂಡು ಕಚೇರಿಗೆ ತೆರಳುತ್ತಾರೆ. ಇದು ಸಾಮಾನ್ಯವಾಗಿದೆ. ಆದರೆ, ಭಾರತೀಯ ಮೂಲದ ಮಹಿಳೆಯೋರ್ವರು ಮಲೇಶ್ಯಾದಲ್ಲಿ ಪ್ರತಿದಿನ 700ಕಿ.ಮೀ. ವಿಮಾನದಲ್ಲಿ ಹಾರಾಟ ನಡೆಸಿ ಕೆಲಸಕ್ಕೆ ತೆರಳಿ ತಮ್ಮ ದೈನಂದಿನ ಕಾರ್ಯ ಚಟುವಟಿಕೆ ಮೂಲಕ ಸಾಮಾಜಿಕ ಜಾಲತಾಣಗಳ ಬಳಕೆದಾರರ ಗಮನ ಸೆಳೆದಿದ್ದಾರೆ.
ಹೌದು, ಇದು ಏರ್ ಏಷ್ಯಾದಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿರುವ ರಾಚೆಲ್ ಕೌರ್ ಅವರ ಕಥೆ. ಪೆನಾಂಗ್ ನಿವಾಸಿಯಾಗಿರುವ ರಾಚೆಲ್ ಕೌರ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇವರು ದಿನನಿತ್ಯ ಪೆನಾಂಗ್ನಿಂದ ಸೆಪಾಂಗ್ಗೆ ವಿಮಾನದ ಮೂಲಕ ಪ್ರಯಾಣಿಸಿ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗುತ್ತಾರೆ.
ಮೂಲತಃ ಪೆನಾಂಗ್ನವರಾದ ರಾಚೆಲ್ ಕೌರ್ 2024ರ ಮೊದಲು ಸೆಪಾಂಗ್ನ ತಮ್ಮ ಕಚೇರಿಯ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಅವರು ತನ್ನ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕೆಂಬ ಬಯಕೆಯಿಂದ 2024ರಲ್ಲಿ ಪ್ರತಿದಿನ ಕೆಲಸಕ್ಕೆ ವಿಮಾನದಲ್ಲಿ ತೆರಳುವ ದಿಟ್ಟ ನಿರ್ಧಾರಕ್ಕೆ ಬಂದಿದ್ದಾರೆ.
ʼನನಗೆ ಇಬ್ಬರು ಮಕ್ಕಳಿದ್ದಾರೆ, ನನ್ನ ಮಗನಿಗೆ 12 ವರ್ಷ ವಯಸ್ಸು ಮತ್ತು ನನ್ನ ಮಗಳಿಗೆ 11 ವರ್ಷ ವಯಸ್ಸು, ಮಕ್ಕಳು ಬೆಳೆಯುವಾಗ ತಾಯಿ ಜೊತೆಯಾಗಿರಬೇಕೆಂದು ನಾನು ಬಯಸುತ್ತೇನೆ. ವಿಮಾನದಲ್ಲಿ ಪ್ರಯಾಣ ಮಾಡುವ ಮೂಲಕ ನಾನು ಪ್ರತಿದಿನ ಮನೆಗೆ ತೆರಳಲು ಸಾಧ್ಯವಾಗುತ್ತದೆ. ಪ್ರತಿದಿನ ನಾನು ವಿಮಾನದಲ್ಲಿ ಹಾರಾಟ ನಡೆಸುವುದರಿಂದ ನನಗೆ ದೈನಂದಿನ ವೆಚ್ಚದಲ್ಲಿ ಕೂಡ ಉಳಿತಾಯವಾಗುತ್ತಿದೆ. ಇದಕ್ಕೂ ಮೊದಲು, ಬಾಡಿಗೆ ಮತ್ತು ಇತರ ವೆಚ್ಚಗಳಿಗಾಗಿ ಕನಿಷ್ಠ 474 ಡಾಲರ್ (ಅಂದಾಜು 41,000ರೂ) ಪಾವತಿಸುತ್ತಿದ್ದೆ, ಆದರೆ ಈಗ ಮಾಸಿಕ ಪ್ರಯಾಣ ವೆಚ್ಚ 316 ಡಾಲರ್ (ಅಂದಾಜು ರೂ. 27,000) ರೂ.ಎಂದು ಹೇಳಿದ್ದಾರೆ.
ರಾಚೆಲ್ ಕೌರ್ ದೈನಂದಿನ ದಿನಚರಿ
ಕೌರ್ ಮುಂಜಾನೆ 4 ಗಂಟೆಗೆ ಎದ್ದು 5 ಗಂಟೆಗೆ ಮನೆಯಿಂದ ಹೊರಡುತ್ತಾರೆ. ಅವರು ಪೆನಾಂಗ್ ವಿಮಾನ ನಿಲ್ದಾಣಕ್ಕೆ ಹೋಗಿ 6.30ರ ವಿಮಾನದಲ್ಲಿ ಕೌಲಾಲಂಪುರ್ ಗೆ ತೆರಳುತ್ತಾರೆ. ಬೆಳಿಗ್ಗೆ 7.45ಕ್ಕೆ ತನ್ನ ಕಚೇರಿ ತಲುಪಿ ರಾತ್ರಿ 8 ಗಂಟೆಗೆ ತನ್ನ ಕೆಲಸವನ್ನು ಮುಗಿಸಿಕೊಂಡು ಮತ್ತೆ ವಿಮಾನದಲ್ಲಿ ಮನೆಗೆ ವಾಪಾಸ್ಸು ಬರುತ್ತಾರೆ. ಅವರು ಪ್ರತಿದಿನ ಒಟ್ಟು 700 ಕಿ.ಮೀ. ವಿಮಾನದಲ್ಲಿ ಹಾರಾಟ ನಡೆಸುತ್ತಾರೆ.
ರಾಚೆಲ್ ಕೌರ್ ವಿಮಾನದಲ್ಲಿ ಸಂಗೀತವನ್ನು ಕೇಳುವುದು, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವ ಮೂಲಕ ಸಮಯವನ್ನು ವ್ಯಯಿಸುತ್ತಾರೆ. ವಿಮಾನದಿಂದ ಇಳಿದ ನಂತರ ಕಚೇರಿಗೆ 5 ರಿಂದ 10 ನಿಮಿಷ ನಡೆದುಕೊಂಡು ತೆರಳುತ್ತಾರೆ. ಅವರು ಮನೆಯಲ್ಲಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಕಚೇರಿಯಲ್ಲಿ ಕೆಲಸ ಮಾಡುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಕಚೇರಿಯಲ್ಲಿದ್ದಾಗ ಸಂಪೂರ್ಣವಾಗಿ ಕೆಲಸದ ಮೇಲೆ ನಿಗಾ ವಹಿಸುತ್ತಾರೆ ಮತ್ತು ಮನೆಗೆ ಬಂದ ಬಳಿಕ ತನ್ನ ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಾರೆ.