ರಫಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ವಿಶ್ವ ಸಂಸ್ಥೆಯ ಭಾರತೀಯ ಸಿಬ್ಬಂದಿ ಬಲಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ವಿಶ್ವ ಸಂಸ್ಥೆಯಲ್ಲಿ ಕೆಲಸ ಮಾಡುವ ಭಾರತೀಯ ಸಿಬ್ಬಂದಿಯೊಬ್ಬರು ರಫಾ ನಗರದಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷ ಆರಂಭಗೊಂಡ ನಂತರ ವಿಶ್ವ ಸಂಸ್ಥೆಯ ಅಂತರರಾಷ್ಟ್ರೀಯ ಸಿಬ್ಬಂದಿಯೊಬ್ಬರು ಬಲಿಯಾದ ಮೊದಲ ಘಟನೆ ಇದಾಗಿದೆ.
ಮೃತ ವ್ಯಕ್ತಿ ವಿಶ್ವ ಸಂಸ್ಥೆಯ ಸುರಕ್ಷತೆ ಮತ್ತು ಭದ್ರತೆ ಇಲಾಖೆಯ ಸಿಬ್ಬಂದಿಯಾಗಿದ್ದರು. ಅವರ ಗುರುತನ್ನು ಬಹಿರಂಗಪಡಿಸಲಾಗಿಲ್ಲದೇ ಇದ್ದರೂ ಆತ ಭಾರತೀಯರು ಮತ್ತು ಮಾಜಿ ಸೇನಾ ಸಿಬ್ಬಂದಿ ಎಂದು ಹೇಳಲಾಗಿದೆ.
ರಫಾದಲ್ಲಿ ಭಾರತೀಯ ವ್ಯಕ್ತಿಯ ಜೊತೆಗಿದ್ದ ಇನ್ನೊಬ್ಬ ವಿಶ್ವ ಸಂಸ್ಥೆಯ ಸಿಬ್ಬಂದಿ ಗಾಯಗೊಂಡಿದ್ದರು. ಅವರು ರಫಾದಲ್ಲಿರುವ ಯುರೋಪಿಯನ್ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು.
ಈ ಘಟನೆಯ ಬಗ್ಗೆ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೋ ಗಟೆರೆಸ್ ಖೇದ ವ್ಯಕ್ತಪಡಿಸಿದ್ದಾರೆ.
ಗಟೆರೆಸ್ ಅವರ ಉಪ ವಕ್ತಾರ ಫರ್ಹಾನ್ ಹಖ್ ಪ್ರತಿಕ್ರಿಯಿಸಿ, ವಿಶ್ವ ಸಂಸ್ಥೆ ತನ್ನ ಸಿಬ್ಬಂದಿಯ ಮೇಲೆ ನಡೆಯುವ ದಾಳಿಯನ್ನು ಖಂಡಿಸುತ್ತದೆ ಮತ್ತು ಅವುಗಳ ಸಂಪೂರ್ಣ ತನಿಖೆಗೆ ಆಗ್ರಹಿಸುತ್ತದೆ ಎಂದು ಹೇಳಿದರು.