ಅಮೆರಿಕ: ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಭಾರತೀಯ ವಿದ್ಯಾರ್ಥಿನಿಯ ಬಂಧನ
ಅಚಿಂತ್ಯಾ ಶಿವಲಿಂಗಮ್ (Photo credit: indiatoday.in)
ವಾಷಿಂಗ್ಟನ್: ಕ್ಯಾಂಪಸ್ ಆವರಣದಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಅಚಿಂತ್ಯಾ ಶಿವಲಿಂಗಮ್ ಎಂಬವರನ್ನು ಅಮೆರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾನಿಲಯ ಉಚ್ಚಾಟಿಸಿದ್ದು, ಶಿಸ್ತುಕ್ರಮ ಪ್ರಕ್ರಿಯೆ ಕಾಯ್ದಿರಿಸಿದೆ. ಗಾಝಾದಲ್ಲಿ ಇಸ್ರೇಲ್- ಹಮಾಸ್ ನಡುವಿನ ಯುದ್ಧದ ವಿರುದ್ಧ ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಸಂಭವಿಸಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದ ಶಿವಲಿಂಗಮ್ ಓಹಿಯೊದ ಕೊಲಂಬಸ್ನಲ್ಲಿ ಬೆಳೆದರು. ಅವರನ್ನು ಇತರ ಸಹಪಾಠಿಗಳ ಜತೆ ಗುರುವಾರ ಬಂಧಿಸಲಾಗಿದೆ ಎಂದು ಪ್ರಿನ್ಸ್ ಟನ್ ಅಲ್ಯುಮ್ನಿ ವೀಕ್ಲಿ ವರದಿ ಮಾಡಿದೆ. ಪ್ರತಿಭಟನೆ ಆಯೋಜಿಸಿದವರಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದು, ಈ ದಾಖಲೆಯನ್ನು ಉಲ್ಲೇಖಿಸಿ, ಬಂಧನಕ್ಕೊಳಗಾದವರು ಭಾರತೀಯ ವಿದ್ಯಾರ್ಥಿನಿ ಎಂದು ದೃಢಪಡಿಸಿದೆ.
ಗುರುವಾರ ಬೆಳಿಗ್ಗೆ ಪ್ರಿನ್ಸ್ ಟನ್ ವಿವಿಯ ಮೆಕ್ಗೋಶ್ ಕಂಟ್ರಿಯಾರ್ಡ್ನಲ್ಲಿ ಅಧಿಕಾರಿಗಳ ಎಚ್ಚರಿಕೆಯನ್ನು ದಿಕ್ಕರಿಸಿ ಪ್ರತಿಭಟನಾ ಡೇರೆಯನ್ನು ಹಾಕಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಆ ಬಳಿಕ ಪ್ರತಿಭಟನಾಕಾರರು ತಮ್ಮ ಡೇರೆಗಳನ್ನು ತೆರವುಗೊಳಿಸಿದರೂ, ಧರಣಿ ಮುಂದುವರಿಸಿದರು ಎನ್ನಲಾಗಿದೆ.
ಆರಂಭದಲ್ಲಿ ಧರಣಿಗೆ 110 ವಿದ್ಯಾರ್ಥಿಗಳು ಇದ್ದರು. ಬಳಿಕ ಮಧ್ಯಾಹ್ನದ ವೇಳೆಗೆ 300 ಮಂದಿಗೆ ಈ ಸಂಖ್ಯೆ ಹೆಚ್ಚಿತು. ಭಾರತೀಯ ವಿದ್ಯಾರ್ಥಿಯ ಬಂಧನವನ್ನು ದೃಢಪಡಿಸಿರುವ ವಿವಿ ವಕ್ತಾರರಾದ ಜೆನ್ನಿಫರ್ ಮೊರಿಲ್, ಪ್ರತಿಭಟನೆ ನಿಲ್ಲಿಸಿ ಜಾಗ ತೆರವುಗೊಳಿಸುವಂತೆ ಸಾರ್ವಜನಿಕ ಸುರಕ್ಷಾ ವಿಭಾಗ ಪದೇ ಪದೇ ಎಚ್ಚರಿಕೆ ನೀಡಿದ ಬಳಿಕವೂ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.