ಲಂಡನ್: ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿಯ ಮೃತದೇಹ ಪತ್ತೆ
ಮಿತ್ಕುಮಾರ್ ಪಟೇಲ್ (Photo: gofundme.com)
ಲಂಡನ್: ಬ್ರಿಟನ್ ನಲ್ಲಿ ಕಳೆದ ತಿಂಗಳು ನಾಪತ್ತೆಯಾಗಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿಯು ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್ ಗೆ ಆಗಮಿಸಿದ್ದ ಮಿತ್ಕುಮಾರ್ ಪಟೇಲ್ ಎಂಬ ವಿದ್ಯಾರ್ಥಿಯು ನವೆಂಬರ್ 17ರಿಂದ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿತ್ತು.
ನವೆಂಬರ್ 21ರಂದು ಪೂರ್ವ ಲಂಡನ್ ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿಯ ಥೇಮ್ಸ್ ನದಿಯಲ್ಲಿ ಆತನ ಮೃತದೇಹವನ್ನು ಮೆಟ್ರೊಪಾಲಿಟಿನ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
“ಈ ಸಾವು ಸಂಶಯಾಸ್ಪದದಂತೆ ಕಂಡು ಬರುತ್ತಿಲ್ಲ” ಎಂದು ಮೆಟ್ರೋಪಾಲಿಟಿನ್ ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿಯ ಸಂಬಂಧಿಯಾದ ಪಾರ್ಥ್ ಪಟೇಲ್ ‘ಗೋ ಫಂಡ್ ಮೀ’ ಎಂಬ ನಿಧಿ ಸಂಗ್ರಹ ಕಾರ್ಯವನ್ನು ಪ್ರಾರಂಭಿಸಿದ್ದು, ಕಳೆದ ಒಂದು ವಾರದಲ್ಲಿ 4,500 ಪೌಂಡ್ ಹಣವನ್ನು ಸಂಗ್ರಹಿಸಿದ್ದಾರೆ.
“ಮಿತ್ಕುಮಾರ್ ಪಟೇಲ್ 23 ವರ್ಷದ ಯುವಕನಾಗಿದ್ದು, ಉನ್ನತ ವ್ಯಾಸಂಗಕ್ಕಾಗಿ ಸೆಪ್ಟೆಂಬರ್ 19, 2023ರಂದು ಬ್ರಿಟನ್ ಗೆ ಬಂದಿದ್ದ. ಆತ ರೈತ ಕುಟುಂಬಕ್ಕೆ ಸೇರಿದ್ದು, ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ಆತ ನವೆಂಬರ್ 17, 2023ರಿಂದ ಕಾಣೆಯಾಗಿದ್ದು, ಇದೀಗ ನವೆಂಬರ್ 21ರಂದು ಆತನ ಮೃತದೇಹವನ್ನು ಕ್ಯಾನರಿ ವಾರ್ಫ್ ಬಳಿಯ ನದಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದು ನಮಗೆಲ್ಲ ತುಂಬಾ ದುಃಖಕರ ಸಂಗತಿಯಾಗಿದೆ. ಹೀಗಾಗಿ, ನಾವು ಆತನ ಕುಟುಂಬಕ್ಕೆ ನೆರವು ಒದಗಿಸಲು ಹಾಗೂ ಆತನ ಮೃತ ದೇಹವನ್ನು ಭಾರತಕ್ಕೆ ರವಾನಿಸಲು ನಿಧಿ ಸಂಗ್ರಹ ಕಾರ್ಯ ನಡೆಸುತ್ತಿದ್ದೇವೆ” ಎಂದು ನಿಧಿ ಸಂಗ್ರಹ ಮನವಿಯಲ್ಲಿ ಹೇಳಲಾಗಿದೆ.
ಸಂಗ್ರಹಗೊಳ್ಳುವ ನಿಧಿಯನ್ನು ಭಾರತದಲ್ಲಿರುವ ಆತನ ಕುಟುಂಬಕ್ಕೆ ಸುರಕ್ಷಿತವಾಗಿ ಹಸ್ತಾಂತರಿಸಲಾಗುವುದು ಎಂದು ಆ ಮನವಿಯಲ್ಲಿ ಹೇಳಲಾಗಿದೆ.
ಲಂಡನ್ ನಲ್ಲಿ ವಾಸಿಸುತ್ತಿದ್ದ ಆತ, ದೈನಂದಿನ ವಾಯು ವಿಹಾರಕ್ಕಾಗಿ ತೆರಳಿ, ಮರಳಿ ಮನೆಗೆ ವಾಪಸು ಬರದಿದ್ದಾಗ ಆತಂಕಗೊಂಡ ಆತನ ಸಂಬಂಧಿಕರು ನಾಪತ್ತೆ ದೂರನ್ನು ದಾಖಲಿಸಿದ್ದರು. ಇದಾದ ನಂತರ, ಆತ ತನ್ನ ಮನೆಯ ಕೀಲಿ ಕೈಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುವುದು ಅವರ ಗಮನಕ್ಕೆ ಬಂದಿತ್ತು.