ಅಮೆರಿಕ: ಸುತ್ತಿಗೆಯಿಂದ ಬಡಿದು ಭಾರತೀಯ ವಿದ್ಯಾರ್ಥಿಯ ಹತ್ಯೆ
ಅನಾಥ ವ್ಯಕ್ತಿಗೆ ಕನಿಕರ ತೋರಿಸಿ ಆಹಾರ ನೀಡಿದ್ದೇ ಮುಳುವಾಯಿತೇ?
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಸೂಪರ್ ಮಾರ್ಕೆಟ್ ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ವಿವೇಕ್ ಸೈನಿಯನ್ನು ಮನೆಯಿಲ್ಲದ ಅನಾಥ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಬಡಿದು ಹತ್ಯೆ ಮಾಡಿರುವ ಪ್ರಕರಣ ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ವರದಿಯಾಗಿದೆ.
ಶಿಕ್ಷಣದ ಜತೆ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದ ವಿವೇಕ್, ತಾನು ಕೆಲಸ ಮಾಡುತ್ತಿದ್ದ ಸೂಪರ್ ಮಾರ್ಕೆಟ್ ನ ಹೊರಬದಿಯಲ್ಲಿ ಮಲಗುತ್ತಿದ್ದ ಅನಾಥ ವ್ಯಕ್ತಿ ಫಾಕ್ನರ್ ಎಂಬಾತನ ಬಗ್ಗೆ ಕನಿಕರದಿಂದ ಆಹಾರ, ನೀರು ಒದಗಿಸುತ್ತಿದ್ದ. ಕ್ರಮೇಣ ಫಾಕ್ನರ್ ಅಂಗಡಿಯೊಳಗೆ ಬಂದು ಸಿಗರೇಟು, ಕಂಬಳಿ ನೀಡುವಂತೆ ಕಿರಿಕಿರಿ ಮಾಡುತ್ತಿದ್ದ. ಆತನಿಗೆ ಜಾಕೆಟ್ ಒಂದನ್ನು ನೀಡಿದ ವಿವೇಕ್, ತಕ್ಷಣ ಅಂಗಡಿಯಿಂದ ಹೊರಗೆ ಹೋಗದಿದ್ದರೆ ಪೊಲೀಸರನ್ನು ಕರೆಸುವುದಾಗಿ ಎಚ್ಚರಿಕೆ ನೀಡಿ ತನ್ನ ಕೆಲಸದಲ್ಲಿ ನಿರತನಾಗಿದ್ದಾಗ ಹಿಂದಿನಿಂದ ಬಂದ ಆರೋಪಿ ತನ್ನಲ್ಲಿದ್ದ ಸುತ್ತಿಗೆಯಿಂದ ವಿವೇಕ್ನ ತಲೆ ಹಾಗೂ ಮುಖಕ್ಕೆ ಸುಮಾರು 50 ಬಾರಿ ಹೊಡೆದಿದ್ದರಿಂದ ವಿವೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಗ ಇತರ ಕೆಲಸಗಾರರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದು ಪೊಲೀಸರು ಬರುವವರೆಗೂ ಫಾಕ್ನರ್ ಸುತ್ತಿಗೆ ಹಿಡಿದುಕೊಂಡು ಸ್ಥಳದಲ್ಲೇ ನಿಂತಿದ್ದ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.