ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ
ವಾಷಿಂಗ್ಟನ್: ಅಮೆರಿಕದ ಒಹಿಯೊದಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದ 26 ವರ್ಷದ ಭಾರತೀಯ ಯುವಕನ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯಕೀಯ ವಿಶ್ವವಿದ್ಯಾನಿಲಯ ಪ್ರಕಟಿಸಿದೆ.
ಸಿನ್ಸಿನಾಟಿ ವಿಶ್ವವಿದ್ಯಾನಿಲಯ ವೈದ್ಯಕೀಯ ಕಾಲೇಜಿನ ನಾಲ್ಕನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದ ಆದಿತ್ಯ ಅದಲ್ಕಾ ಹತ್ಯೆಗೀಡಾದ ವಿದ್ಯಾರ್ಥಿ ಎಂದು ವೈದ್ಯಕೀಯ ಶಾಲೆಯ ಹೇಳಿಕೆಯನ್ನು ಉಲ್ಲೇಖಿಸಿ ಡಬ್ಲ್ಯುಎಕ್ಸ್ಐಎಕ್ಸ್- ಟಿವಿ ವರದಿ ಮಾಡಿದೆ.
ಆದಿತ್ಯ ಅದಲ್ಕಾ ಯುಸಿ ಮೆಡಿಕಲ್ ಸೆಂಟರ್ ನಲ್ಲಿ ಈ ತಿಂಗಳ ಆರಂಭದಲ್ಲಿ ಮೃತಪಟ್ಟಿದ್ದಾರೆ ಎಂದು ಹ್ಯಾಮಿಲ್ಟನ್ ಕೌಂಟಿ ಕೊರೋನರ್ ಸ್ಪಷ್ಟಪಡಿಸಿದೆ.
ವಿಯಾಡಕ್ಟ್ ಪಶ್ಚಿಮ ಬೆಟ್ಟ ಶ್ರೇಣಿಯ ಗೋಡೆಗೆ ಅಪ್ಪಳಿಸಿದ ಕಾರಿನ ಒಳಗೆ ನವೆಂಬರ್ 9ರಂದು ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಇದ್ದುದು ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಸಿನ್ಸಿನಾಟಿ ಪೊಲೀಸ್ ಲೆಫ್ಟಿನೆಂಟ್ ಜೋನಾಥನ್ ಕನ್ನಿಂಗ್ ಹ್ಯಾಮ್ ಹೇಳಿದ್ದಾರೆ.
ಆ ದಾರಿಯಾಗಿ ಹಾದು ಹೋಗುತ್ತಿದ್ದ ಚಾಲಕರು 911ಗೆ ಕರೆ ಮಾಡಿ, ಕಾರಿನಲ್ಲಿ ಗುಂಡು ಹಾಯ್ದ ರಂಧ್ರಗಳಿದ್ದು, ಒಳಗೆ ವ್ಯಕ್ತಿಗೆ ಗುಂಡು ತಗುಲಿದೆ ಎಂಬ ಮಾಹಿತಿ ನೀಡಿದ್ದರು ಎಂದು ವಿವರಿಸಿದ್ದಾರೆ. ಗಾಯಾಳು ಆದಿತ್ಯ ಅವರನ್ನು ಯುಸಿ ಮೆಡಿಕಲ್ ಸೆಂಟರ್ ಗೆ ಚಿಂತಾಜನಕ ಸ್ಥಿತಿಯಲ್ಲಿ ಕಳುಹಿಸಲಾಗಿತ್ತು. ಎರಡು ದಿನ ಬಳಿಕ ಅವರು ಮೃತಪಟ್ಟಿದ್ದಾರೆ.