ಅಮೆರಿಕಾ ಜಿಮ್ ನಲ್ಲಿ ವಿಚಿತ್ರವಾಗಿ ನೋಡಿದ್ದಕ್ಕೆ ತಲೆಗೆ ಇರಿತಕ್ಕೊಳಗಾಗಿದ್ದ ಭಾರತೀಯ ವಿದ್ಯಾರ್ಥಿಯ ಮೃತ್ಯು
Photo : x/@catale7a
ಇಂಡಿಯಾನಾ (ಅಮೆರಿಕಾ): ಅ.29ರಂದು ಅಮೆರಿಕಾದ ಇಂಡಿಯಾನಾ ರಾಜ್ಯದಲ್ಲಿನ ಜಿಮ್ ಒಂದರಲ್ಲಿ ಇರಿತಕ್ಕೆ ಒಳಗಾಗಿದ್ದ 24 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ವಾಲ್ಪರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾದ ವರುಣ್ ರಾಜ್ ಪೂಚ ಎಂದು ಗುರುತಿಸಲಾಗಿದ್ದು, ಆತನ ತಲೆಗೆ 24 ವರ್ಷದ ಜೋರ್ಡನ್ ಆ್ಯಂಡ್ರೇಡ್ ಎಂಬ ವ್ಯಕ್ತಿ ಇರಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ವಾಲ್ಪರೈಸೊ ವಿಶ್ವವಿದ್ಯಾಲಯವು, “ವರುಣ್ ರಾಜ್ ಮೃತಪಟ್ಟಿರುವ ವಿಷಯವನ್ನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ವಿಶ್ವವಿದ್ಯಾಲಯ ಸಮುದಾಯವು ತನ್ನ ಸ್ವಂತ ವ್ಯಕ್ತಿಯೊಬ್ಬನನ್ನು ಕಳೆದುಕೊಂಡಿದೆ. ವರುಣ್ ಕುಟುಂಬ ಹಾಗೂ ಅವರ ಗೆಳೆಯರಿಗೆ ನಮ್ಮ ಸಂತಾಪ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ. ನಾವು ಭಾರೀ ನಷ್ಟಕ್ಕೆ ಕಂಬನಿ ಮಿಡಿಯುತ್ತೇವೆ” ಎಂದು ಹೇಳಿದೆ.
ಆರೋಪಿ ಜೋರ್ಡನ್ ಆ್ಯಂಡ್ರೇಡ್ ವಿರುದ್ಧ ಕೊಲೆ ಪ್ರಯತ್ನದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ದಾಖಲಾಗಿರುವ ನೂತನ ಆರೋಪಗಳ ಪ್ರಕಾರ, ವರುಣ್ ತನ್ನನ್ನು ಹತ್ಯೆ ಮಾಡಲು ಮುಂದಾಗಿದ್ದ ಎಂದು ಆ್ಯಂಡ್ರೇಡ್ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಹೇಳಲಾಗಿದೆ.
ವರುಣ್ ಹಾಗೂ ನಾನು ದಾಳಿಗೂ ಮುನ್ನ ಎಂದಿಗೂ ಪರಸ್ಪರ ಮಾತನಾಡಿಯೇ ಇರಲಿಲ್ಲ ಎಂದು ಪೊಲೀಸರಿಗೆ ತಿಳಿಸಿರುವ ಆ್ಯಂಡ್ರೇಡ್, ಆದರೆ, ವರುಣ್ ಬೆದರಿಸುತ್ತಿದ್ದಾನೆ ಎಂದು ಮತ್ತೊಬ್ಬರು ನನಗೆ ತಿಳಿಸಿದ್ದರು ಎಂದು ಹೇಳಿದ್ದಾನೆ.
“ಈ ಕುರಿತು ಪೊಲೀಸ್ ಅಧಿಕಾರಿಗಳು ಪ್ಲಾನೆಟ್ ಫಿಟ್ನೆಸ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಇರಿತಕ್ಕೊಳಗಾದ ವ್ಯಕ್ತಿಯು ನಮ್ಮ ಜಿಮ್ ನ ನಿಯಮಿತ ಸದಸ್ಯನಾಗಿದ್ದು, ಸಾಮಾನ್ಯವಾಗಿ ಸಂಯಮವಾಗಿರುತ್ತಿದ್ದ ಹಾಗೂ ಮೌನಿ ಮತ್ತು ಬಿಗುಮಾನದ ವ್ಯಕ್ತಿಯಾಗಿದ್ದ ಎಂದು ತಿಳಿಸಿದ್ದಾರೆ ಹಾಗೂ ಆತ ಜಗಳಗಂಟನಾಗಿರಲಿಲ್ಲ ಎಂಬುದನ್ನು ಸೂಚಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣದ ಕಮ್ಮಮ್ ಜಿಲ್ಲೆಯವರಾದ ವರುಣ್, ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಅಮೆರಿಕಾದಲ್ಲಿ ಅವರು ಆಗಸ್ಟ್ 2022ರಲ್ಲಿ ತಮ್ಮ ವ್ಯಾಸಂಗವನ್ನು ಪ್ರಾರಂಭಿಸಿದ್ದರು.