ಪಾಕಿಸ್ತಾನದ `ಫೇಸ್ಬುಕ್ ಗೆಳೆಯ'ನನ್ನು ವಿವಾಹವಾದ ಭಾರತೀಯ ಮಹಿಳೆ
Photo: PTI
ಪೇಷಾವರ: ಫೇಸ್ಬುಕ್ ಮೂಲಕ ಪರಿಚಯಗೊಂಡ ಪಾಕಿಸ್ತಾನದ ಗೆಳೆಯನನ್ನು ಹುಡುಕಿಕೊಂಡು ಪಾಕ್ಗೆ ತೆರಳಿದ್ದ ಭಾರತದ ವಿವಾಹಿತ ಮಹಿಳೆ ಅಂಜು, ಆತನನ್ನು ವಿವಾಹವಾಗಿದ್ದಾಳೆ ಎಂದು ವರದಿಯಾಗಿದೆ.
ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ರಾಜಸ್ತಾನದ ನಿವಾಸಿ ಅಂಜುಗೆ 2019ರಲ್ಲಿ ಪಾಕಿಸ್ತಾನದ ಖೈಬರ್ ಪಖ್ತೂಂಖ್ವಾ ನಿವಾಸಿ 29 ವರ್ಷದ ನಸ್ರುಲ್ಲಾ ಎಂಬಾತನ ಪರಿಚಯವಾಗಿದ್ದು ಕ್ರಮೇಣ ಇಬ್ಬರೂ ಆತ್ಮೀಯರಾಗಿದ್ದಾರೆ. ಗುರುವಾರ ಜೈಪುರಕ್ಕೆ ಭೇಟಿ ನೀಡುವುದಾಗಿ ಪತಿ ಅರವಿಂದ್ಗೆ ಹೇಳಿ, ಮಕ್ಕಳನ್ನು ಮನೆಯಲ್ಲೇ ಬಿಟ್ಟು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಿ ನಸ್ರುಲ್ಲಾನನ್ನು ಭೇಟಿಯಾಗಿದ್ದಾಳೆ. ಇದೀಗ ಇವರಿಬ್ಬರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಎದುರು ವಿವಾಹವಾಗಿದ್ದು ಇಸ್ಲಾಂ ಧರ್ಮಕ್ಕೆ ಸ್ವೀಕರಿಸಿ ಅಂಜು ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ತಾನು ಸ್ವಇಚ್ಛೆಯಿಂದ ಪಾಕ್ಗೆ ಬಂದಿದ್ದು ಇಲ್ಲಿ ಖುಷಿಯಾಗಿದ್ದೇನೆ ಎಂದು ಭಾರತೀಯ ಮಹಿಳೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾಳೆ. ಬಳಿಕ ಇಬ್ಬರನ್ನೂ ಬಿಗಿ ಭದ್ರತೆಯಲ್ಲಿ ನಸ್ರುಲ್ಲಾನ ಮನೆಗೆ ತಲುಪಿಸಲಾಗಿದೆ ಎಂದು ವರದಿಯಾಗಿದೆ. ಭಾರತೀಯ ಮಹಿಳೆ ಒಂದು ತಿಂಗಳಾವಧಿಯ ವಿಸಿಟಿಂಗ್ ವೀಸಾದಡಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದು ಅವರ ಪ್ರಯಾಣ ದಾಖಲೆಪತ್ರಗಳು ಕ್ರಮಬದ್ಧವಾಗಿವೆ. ತನ್ನ ಗೆಳೆಯನನ್ನು ಹುಡುಕಿಕೊಂಡು ಆಕೆ ಪಾಕಿಸ್ತಾನಕ್ಕೆ ಆಗಮಿಸಿದ್ದು ಇಲ್ಲಿ ಖುಷಿಯಾಗಿದ್ದಾಳೆ. ನಸ್ರುಲ್ಲಾನ ಜತೆ ವಾಸಿಸಲು ಆಕೆಗೆ ಅನುಮತಿ ನೀಡಲಾಗಿದೆ ಎಂದು ಖೈಬರ್ ಪಖ್ತೂಂಖ್ವಾದ ಹಿರಿಯ ಪೊಲೀಸ್ ಅಧಿಕಾರಿ ಮುಷ್ತಾಕ್ ಖಾನ್ ಹೇಳಿದ್ದಾರೆ.