ತಕ್ಷಣವೇ ಉದ್ವಿಗ್ನ ಸಿರಿಯಾ ತೊರೆಯಲು ಭಾರತೀಯರಿಗೆ ಸಲಹೆ
PC: x.com/htTweets
ಹೊಸದಿಲ್ಲಿ: ಸಿರಿಯಾದಲ್ಲಿ ಯುದ್ಧ ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಸಿರಿಯಾದಲ್ಲಿರುವ ಭಾರತೀಯ ಪ್ರಜೆಗಳು ತಕ್ಷಣವೇ ದೇಶ ತೊರೆಯುವಂತೆ ಮತ್ತು ಮುಂದಿನ ಸೂಚನೆ ನೀಡುವವರೆಗೆ ಸಿರಿಯಾಗೆ ಪ್ರಯಾಣ ಬೆಳೆಸದಂತೆ ಸಲಹೆ ಮಾಡಿದೆ.
ತುರ್ತು ಸಹಾಯವಾಣಿ ಮತ್ತು ಇ-ಮೇಲ್ ಐಡಿಯನ್ನು ಪ್ರಕಟಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಸಿರಿಯಾದಲ್ಲಿರುವ ಎಲ್ಲ ಭಾರತೀಯರು ದಮಾಸ್ಕಸ್ ನಲ್ಲಿರುವ ಭಾರತೀಯ ದೂತವಾಸ ಜತೆ ನಿರಂತರ ಸಂಪರ್ಕದಲ್ಲಿ ಇರಬೇಕು" ಎಂದು ಕೋರಿದೆ.
"ಲಭ್ಯವಿರುವ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣ ಬೆಳೆಸಲು ಸಾಧ್ಯವಿರುವ ಎಲ್ಲ ಭಾರತೀಯರು ತಕ್ಷಣವೇ ಆ ದೇಶವನ್ನು ತೊರೆಯುವುದು ಸೂಕ್ತ. ಯಾರು ಪ್ರಯಾಣ ಮಾಡಲು ಸಾಧ್ಯವಿಲ್ಲವೋ ಅಂಥವರು, ತಮ್ಮ ಸುರಕ್ಷತೆ ಬಗ್ಗೆ ಗರಿಷ್ಠ ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕು ಮತ್ತು ತಮ್ಮ ಚಲನೆಯನ್ನು ಸಾಧ್ಯವಾದಷ್ಟೂ ನಿರ್ಬಂಧಿಸಿಕೊಳ್ಳಬೇಕು" ಎಂದು ತುರ್ತು ಸಂದೇಶದಲ್ಲಿ ಹೇಳಿದೆ.
ದಮಾಸ್ಕಸ್ ನಲ್ಲಿರುವ ಭಾರತೀಯ ದೂತವಾಸವನ್ನು ಸಂಪರ್ಕಿಸಲು ತುರ್ತು ಸಹಾಯವಾಣಿ ಸಂಖ್ಯೆ (+963993385973)ಯನ್ನು ಪ್ರಕಟಿಸಲಾಗಿದೆ. ಈ ಸಂಖ್ಯೆಯನ್ನು ವಾಟ್ಸಪ್ನಲ್ಳೂ ಬಳಸಬಹುದಾಗಿದೆ. ಜತೆಗೆ ತುರ್ತು ಇ-ಮೇಲ್ ಐಡಿ (hoc.damascus@mea.gov.in.) ಕೂಡಾ ಪ್ರಕಟಿಸಲಾಗಿದೆ. ಸಿಬ್ಬಂದಿಯನ್ನು ಸಂಪರ್ಕಿಸಿದ ತಕ್ಷಣ ಕ್ಷಣ ಕ್ಷಣದ ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ವಿವರಿಸಲಾಗಿದೆ.