ಫೆಲೆಸ್ತೀನಿಯನ್ನರ ಬದಲಿಗೆ ನಿರ್ಮಾಣ ಕೆಲಸಗಳಿಗೆ ಇಸ್ರೇಲ್ ಪ್ರವೇಶಿಸಿದ ಭಾರತೀಯ ಕಾರ್ಮಿಕರು
Photo : PTI
ಟೆಲ್ ಅವೀವ್: ಅಕ್ಟೋಬರ್ 7, 2023ರಂದು ಇಸ್ರೇಲ್ ಪ್ರಜೆಗಳ ಮೇಲೆ ಹಮಾಸ್ ನಡೆಸಿದ ಭೀಕರ ದಾಳಿಯ ನಂತರ, ಲಕ್ಷಾಂತರ ಫೆಲೆಸ್ತೀನ್ ನಿರ್ಮಾಣ ಕಾರ್ಮಿಕರಿಗೆ ಇಸ್ರೇಲ್ ಪ್ರವೇಶದ ಮೇಲೆ ನಿಷೇಧ ಹೇರಲಾಗಿದ್ದು, ಅವರ ಬದಲಿಗೆ ಇದೀಗ ಭಾರತೀಯ ನಿರ್ಮಾಣ ಕಾರ್ಮಿಕರು ಇಸ್ರೇಲ್ ಪ್ರವೇಶಿಸಿದ್ದಾರೆ.
ಸುರಕ್ಷತಾ ಪಟ್ಟಿ, ಶಿರಸ್ತ್ರಾಣ ಹಾಗೂ ಕೆಲಸದ ಬೂಟುಗಳನ್ನು ತೊಟ್ಟು ರಾಜು ನಿಶಾದ್ ಎಂಬ ಕಟ್ಟಡ ಕಾರ್ಮಿಕ, ಕೇಂದ್ರ ಇಸ್ರೇಲ್ ಪಟ್ಟಣವಾದ ಬೀರ್ ಯಾಕೋವ್ ನೆರೆಯಲ್ಲಿನ ನೂತನ ಕಟ್ಟಡವೊಂದರಲ್ಲಿ ಸಾರುವೆ ಕಟ್ಟುವ, ಇಟ್ಟಿಗೆಗಳನ್ನು ಒಡೆಯುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಈ ವಿಸ್ತಾರ ನಿರ್ಮಾಣ ಜಾಗದಲ್ಲಿ ಆತ ಹಾಗೂ ಆತನೊಂದಿಗಿನ ಇನ್ನಿತರ ಭಾರತೀಯ ಕಾರ್ಮಿಕರು ಆ ಸ್ಥಳಕ್ಕೆ ಅಪರಿಚಿತರಂತೆ ಕಂಡು ಬಾರದಿದ್ದರೂ, ಅವರೆಲ್ಲ ಇಸ್ರೇಲ್ ನಿರ್ಮಾಣ ಉದ್ಯಮಕ್ಕೆ ಬಹುತೇಕ ಹೊಸಬರಾಗಿದ್ದಾರೆ. ಹಮಾಸ್ ದಾಳಿಯ ನಂತರ ಇಸ್ರೇಲ್ ಪ್ರವೇಶದಿಂದ ನಿಷೇಧಕ್ಕೊಳಗಾಗಿರುವ ಲಕ್ಷಾಂತರ ಫೆಲೆಸ್ತೀನಿಯನ್ನರ ಜಾಗವನ್ನು ತುಂಬುವ ಇಸ್ರೇಲ್ ಸರಕಾರದ ಪ್ರಯತ್ನದ ಭಾಗವಾಗಿ ಅವರೆಲ್ಲ ಅಲ್ಲಿದ್ದಾರೆ.
ಒಂದು ವೇಳೆ ಹಮಾಸ್ ದಾಳಿಯೇನಾದರೂ ನಡೆದಿರದಿದ್ದರೆ, ನಿಧಾನವಾಗಿ ಮೇಲೇಳುತ್ತಿರುವ ಗಗನಚುಂಬಿ ಕಟ್ಟಡಗಳು, ಮನೆಗಳು, ರಸ್ತೆಗಳು ಹಾಗೂ ಪಾದಚಾರಿ ರಸ್ತೆಗಳ ಈ ಜಾಗದಲ್ಲಿ ಬಹುತೇಕ ಹಿಂದಿಯಲ್ಲದ ಅರೇಬಿಕ್, ಹೀಬ್ರೊ ಹಾಗೂ ಮ್ಯಾಂಡರಿನ್ ಭಾಷೆಯನ್ನೂ ಮಾತನಾಡುವ ಕಾರ್ಮಿಕರು ಇಂದು ಇರುತ್ತಿದ್ದರು.
ಹಮಾಸ್ ದಾಳಿಯಿಂದಾಗಿ ಗಾಝಾ ಪಟ್ಟಿಯಲ್ಲಿ ಇಂದಿಗೂ ಹಮಾಸ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧ ಮುಂದುವರಿದಿದೆ.
ನಂತರ ಈ ಯುದ್ಧವು ಲೆಬನಾನ್ ನಲ್ಲಿರುವ ಇರಾನ್ ಬೆಂಬಲಿತ ಹಿಝ್ಬುಲ್ಲಾ ಗುಂಪು, ಯೆಮೆನ್ ನಲ್ಲಿರುವ ಹುತಿ ಬಂಡುಕೋರರನ್ನೂ ಒಳಗೊಂಡಿದ್ದು, ಇಸ್ಲಾಮಿಕ್ ರಿಪಬ್ಲಿಕ್ ನೊಂದಿಗೆ ನೇರ ಸಂಘರ್ಷಕ್ಕೂ ಕಾರಣವಾಗಿದೆ.
ಆದರೆ, ಇವ್ಯಾವೂ ಇಸ್ರೇಲ್ ಗೆ ಆಗಮಿಸಿರುವ 35 ವರ್ಷದ ನಿಶಾದ್ ನನ್ನು ಧೃತಿಗೆಡಿಸಿಲ್ಲ.
ತನ್ನ ಮನೆಯಿಂದ ಹೊರಗೋಡುವಂತೆ ಮಾಡುವ ಹಲವಾರು ವಾಯು ದಾಳಿ ಮುನ್ನೆಚ್ಚರಿಕೆ ಸಂದೇಶಗಳು ರವಾನೆಯಾಗಿದ್ದರೂ, “ಇಲ್ಲಿ ಭಯಪಡವಂಥದ್ದು ಏನೂ ಇಲ್ಲ” ಎಂದು ಅವರು ಹೇಳುತ್ತಾರೆ.
‘ಒಮ್ಮೆ ಸೈರನ್ ನಿಂತ ಬಳಿಕ ನಾವು ನಮ್ಮ ಕೆಲಸವನ್ನು ಪುನಾರಂಭಿಸುತ್ತೇವೆ” ಎಂದು ಅವರು AFP ಸುದ್ದಿ ಸಂಸ್ಥೆಗೆ ಅವರು ತಿಳಿಸಿದ್ದಾರೆ.
ಇಸ್ರೇಲ್ ನಲ್ಲಿ ಗಳಿಕೆ ಅತ್ಯಧಿಕವಾಗಿದ್ದು, ತಮ್ಮ ತವರಿಗಿಂತ ಮೂರು ಪಟ್ಟು ವೇತನ ದೊರೆಯುವ ಈ ಜಾಗಕ್ಕೆ ಸಾವಿರಾರು ಕಿಮೀ ದೂರದಿಂದ ನಿಶಾದ್ ಥರದವರು ಯಾಕೆ ಬರುತ್ತಿದ್ದಾರೆ ಎಂಬುದಕ್ಕೆ ಕಾರಣವಾಗಿದೆ.
“ನಾನು ಭವಿಷ್ಯಕ್ಕಾಗಿ ಉಳಿತಾಯ ಮಾಡುತ್ತಿದ್ದು, ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ, ನನ್ನ ಕುಟುಂಬಕ್ಕೆ ಏನಾದರೂ ಅರ್ಥಪೂರ್ಣವಾದುದನ್ನು ಮಾಡಬೇಕು ಎಂದು ಯೋಜಿಸಿದ್ದೇನೆ” ಎನ್ನುತ್ತಾರೆ ನಿಶಾದ್.
ಕಳೆದ ವರ್ಷದಿಂದ ಇಸ್ರೇಲ್ ಗೆ ಬಂದಿರುವ 16,000 ಭಾರತೀಯ ಕಾರ್ಮಿಕರ ಪೈಕಿ ನಿಶಾದ್ ಒಬ್ಬರಾಗಿದ್ದು, ಇನ್ನೂ ಸಾವಿರಾರು ಭಾರತೀಯ ಕಾರ್ಮಿಕರನ್ನು ಕರೆ ತರುವ ಯೋಜನೆಯಲ್ಲಿ ಇಸ್ರೇಲ್ ಇದೆ.
►ಹೊಸ ನೇಮಕಾತಿ ಅಭಿಯಾನ
ಭಾರತವು ವಿಶ್ವದ ಐದನೆ ಅತಿ ದೊಡ್ಡ ಹಾಗೂ ಅತಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಆರ್ಥಿಕತೆಯಾಗಿದ್ದರೂ, ಲಕ್ಷಾಂತರ ಜನರಿಗೆ ಪೂರ್ಣಕಾಲಿಕ ಉದ್ಯೋಗ ಸೃಷ್ಟಿಸಲು ಇನ್ನೂ ಪರದಾಡುತ್ತಿದೆ.
ಹಲವಾರು ದಶಕಗಳಿಂದ ಭಾರತೀಯರು ಇಸ್ರೇಲ್ ನಲ್ಲಿ ಉದ್ಯೋಗಸ್ಥರಾಗಿದ್ದು, ಸಾವಿರಾರು ಆರೈಕೆದಾರರು ವಯಸ್ಸಾದ ಇಸ್ರೇಲ್ ಪ್ರಜೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ, ವಜ್ರೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ವೃತ್ತಿಗಳಲ್ಲೂ ಭಾರತೀಯರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಆದರೆ, ಗಾಝಾ ನಡುವಿನ ಯುದ್ಧ ವಿಷಮಿಸಿರುವುದರಿಂದ, ಇಸ್ರೇಲ್ ನಿರ್ಮಾಣ ವಲಯಕ್ಕೂ ಭಾರತೀಯ ನಿರ್ಮಾಣ ಕಾರ್ಮಿಕರನ್ನು ಕರೆತರಲು ಉದ್ಯೋಗ ನೇಮಕಾತಿದಾರರು ಅಭಿಯಾನವೊಂದನ್ನು ಹಮ್ಮಿಕೊಂಡಿದ್ದಾರೆ.
ಈಗಾಗಲೇ 30ಕ್ಕೂ ಹೆಚ್ಚು ದೇಶಗಳಿಗೆ ಸುಮಾರು 5 ಲಕ್ಷ ಭಾರತೀಯರನ್ನು ಉದ್ಯೋಗಕ್ಕೆ ಕಳಿಸಿರುವ ದಿಲ್ಲಿ ಮೂಲದ ಡೈನಾಮಿಕ್ ಸ್ಟಾಫಿಂಗ್ ಸರ್ವೀಸಸ್ ನ ಅಧ್ಯಕ್ಷ ಸಮೀರ್ ಖೋಸ್ಲಾ, ಈವರೆಗೆ ತಮಗೆ ಹೊಸ ಮಾರುಕಟ್ಟೆಯಾದ ಇಸ್ರೇಲ್ ಗೆ 3,500ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರನ್ನು ಕರೆ ತಂದಿದ್ದಾರೆ.
ಅಕ್ಟೋಬರ್ 7ರ ದಾಳಿಯ ನಂತರ, ಗಾಝಾ ಯುದ್ಧವು ಸ್ಫೋಟಗೊಂಡಿದ್ದರಿಂದ ಇಸ್ರೇಲ್ ಪ್ರಾಧಿಕಾರಗಳು ನಿರ್ಮಾಣ ವಲಯದಲ್ಲಿ ವಿದೇಶಿ ಕಾರ್ಮಿಕರಿಗಾಗಿ ಬೇಡಿಕೆ ಇಟ್ಟವು. ಇದಾದ ನಂತರವೇ, ಖುದ್ದು ಖೋಲ್ಸಾ ಕೂಡಾ ಮೊದಲ ಬಾರಿಗೆ ಇಸ್ರೇಲ್ ಗೆ ಆಗಮಿಸಿದ್ದು.
“ನಮಗೆ ಇಲ್ಲಿನ ಮಾರುಕಟ್ಟೆಯ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಇಲ್ಲಿ ಈ ಹಿಂದೆ ಭಾರತದ ಯಾವುದೇ ಉದ್ಯೋಗಿಗಳಿರಲಿಲ್ಲ” ಎನ್ನುತ್ತಾರೆ ಖೋಸ್ಲಾ.
“ನಾವಿನ್ನೂ ಇಲ್ಲಿ ಸುತ್ತಾಟ ನಡೆಸಬೇಕಿದ್ದು, ಇಲ್ಲಿನ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ” ಎನ್ನುವ ಖೋಸ್ಲಾ, ಭಾರತ ಮತ್ತು ಇಸ್ರೇಲ್ ನಡುವೆ ಇರುವ ಉತ್ತಮ ಬಾಂಧವ್ಯದಿಂದಾಗಿ ಭಾರತವು ಇಸ್ರೇಲ್ ಪಾಲಿಗೆ ಸಹಜ ಆಯ್ಕೆಯಾಗಿತ್ತು ಎಂಬುದು ನನ್ನ ಭಾವನೆಯಾಗಿತ್ತು” ಎಂದೂ ಹೇಳುತ್ತಾರೆ.
ಎಲ್ಲ ವೃತ್ತಿಗಳಲ್ಲೂ ನೈಪುಣ್ಯ ಹೊಂದಿರುವ ಬೃಹತ್ ಪ್ರಮಾಣದ ಕುಶಲ ಭಾರತೀಯ ಕಾರ್ಮಿಕರು ಖೋಸ್ಲಾ ಬಳಿ ಇರುವುದರಿಂದ, ಇನ್ನೂ 10,000 ಭಾರತೀಯ ಕಾರ್ಮಿಕರನ್ನು ಇಲ್ಲಿಗೆ ಕರೆ ತರುವ ಕುರಿತು ಅವರು ಯೋಚಿಸುತ್ತಿದ್ದಾರೆ.
►ದೀರ್ಘಾವಧಿ ಪರಿಣಾಮ ಸಾಧ್ಯತೆ
ಸಮೀಪದ ಟೆಲ್ ಅವೀವ್ ನ ಸಣ್ಣ ಫ್ಲ್ಯಾಟ್ ಒಂದರಲ್ಲಿ ವಾಸಿಸುತ್ತಿರುವ ಭಾರತೀಯರು ಗುಂಪೊಂದು ತಮ್ಮ ನಿರ್ಮಾಣ ಕೌಶಲದೊಂದಿಗೆ, ತಾವು ತವರಿನಿಂದ ಕಳೆದುಕೊಂಡಿರುವ ಚಿರಪರಿಚಿತ ಮಸಾಲೆಯುಕ್ತ ಖಾದ್ಯಗಳನ್ನು ತಯಾರಿಸುವುದರಲ್ಲೂ ಸಿದ್ಧಹಸ್ತವಾಗಿದೆ.
“ಸಣ್ಣ ಅವಧಿಯಲ್ಲಿ ಯಾರಾದರೂ ಅಧಿಕ ಸಂಪಾದನೆ ಮಾಡಬಹುದು” ಎನ್ನುತ್ತಾರೆ 39 ವರ್ಷದ ಸುರೇಶ್ ಕುಮಾರ್ ವರ್ಮ. ನಿಶಾದ್ ರಂತೆಯೆ ಅವರೂ ಕೂಡಾ ವಿಪರೀತ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ವರ್ಮ ಇಸ್ರೇಲ್ ನ ವಾಣಿಜ್ಯ ನಗರವಾದ ಉತ್ತರ ಇಸ್ರೇಲ್ ನ ನಿರ್ಮಾಣ ಕಾಮಗಾರಿ ಜಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
“ಹಣ ಗಳಿಸುವುದೂ ಕೂಡಾ ಅನಿವಾರ್ಯವಾಗಿದೆ. ಕುಟುಂಬದ ಭವಿಷ್ಯಕ್ಕಾಗಿ ಕಠಿಣ ಪರಿಶ್ರಮ ಮುಂದುವರಿಸುವುದು ಮುಖ್ಯವಾಗಿದೆ” ಎನ್ನುತ್ತಾರವರು.
ಗಾಝಾ ಯುದ್ಧಕ್ಕೂ ಮುನ್ನ ಇಸ್ರೇಲ್ ನ ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿದ್ದ ಫೆಲೆಸ್ತೀನಿಯನ್ನರಿಗೆ ಹೋಲಿಸಿದರೆ ಭಾರತೀಯ ನಿರ್ಮಾಣ ಕಾರ್ಮಿಕರ ಸಂಖ್ಯೆ ತೀರಾ ಕಡಿಮೆ. ಇದರಿಂದಾಗಿ ನಿರ್ಮಾಣ ವಲಯದ ಸಮಗ್ರ ಅಭಿವೃದ್ಧಿಗೆ ಧಕ್ಕೆಯಾಗಿದೆ ಎನ್ನುತ್ತಾರೆ ಇಸ್ರೇಲ್ ಸಂಶೋಧನಾಕಾರರು.
ಹಮಾಸ್ ದಾಳಿಗೂ ಮುನ್ನ, ಸುಮಾರು 26,000 ವಿದೇಶಿ ಕಾರ್ಮಿಕರೊಂದಿಗೆ ಸುಮಾರು 80,000 ಫೆಲೆಸ್ತೀನಿಯನ್ನರು ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಇಸ್ರೇಲ್ ನ ಕೇಂದ್ರೀಯ ಬ್ಯಾಂಕ್ ನ ಎಯಾಲ್ ಅರ್ಗೋವ್ ಹೇಳುತ್ತಾರೆ.
ಈಗ ಸುಮಾರು 30,000 ವಿದೇಶಿಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಈ ಹಿಂದಿನ ಕಾರ್ಮಿಕರ ಸಂಖ್ಯೆಗೆ ಹೋಲಿಸಿದರೆ ಇದು ತೀರಾ ಅತ್ಯಲ್ಪ. ಯುದ್ಧ ಪೂರ್ವಕ್ಕೆ ಹೋಲಿಸಿದರೆ, 2024ರ ಹಾಲಿ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇ. 25ಕ್ಕಿಂತ ಕಡಿಮೆ ಇದೆ ಎನ್ನುತ್ತಾರವರು.
“ಭಾರತೀಯ ಕಾರ್ಮಿಕರ ಈ ಸಂಖ್ಯೆ ಇನ್ನೂ ಕಡಿಮೆಯೇ ಇದೆ” ಎಂದು ಅರ್ಗೋವ್ ಹೇಳುತ್ತಾರೆ.
“ಇದರಿಂದ ವಸತಿಯಲ್ಲಿ ತಕ್ಷಣವೇ ಕೊರತೆಯಾಗದಿದ್ದರೂ, ಭವಿಷ್ಯದಲ್ಲಿ ಹೊಸ ಕಟ್ಟಡಗಳ ಪೂರೈಕೆಯಲ್ಲಿ ವಿಳಂಬವನ್ನುಂಟು ಮಾಡುವ ಸಾಧ್ಯತೆ ಇದೆ” ಎಂದು ಅವರು ಹೇಳುತ್ತಾರೆ.
“ಇಸ್ರೇಲ್ ನಲ್ಲಿ ಜನಸಂಖ್ಯೆ ಬೆಳೆಯುತ್ತಿದ್ದು, ಪ್ರತಿ ವರ್ಷದ ಶೇ. 2ರ ದರದಲ್ಲಿ ಜನಸಂಖ್ಯೆ ವೃದ್ಧಿಯಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ವಸತಿ ಪೂರೈಕೆಯ ಕೊರತೆ ಹಾಗೂ ವಿಳಂಬವಾಗುವ ಸಾಧ್ಯತೆ ಇದೆ” ಎಂದೂ ಅವರು ಅಭಿಪ್ರಾಯ ಪಡುತ್ತಾರೆ.
ಸೌಜನ್ಯ: ndtv.com