ಇಂಡೊನೇಶ್ಯ: ಅಕ್ರಮ ಚಿನ್ನದ ಗಣಿ ದುರಂತ; ಎಲ್ಲಾ 8 ಮಂದಿ ಸಾವನ್ನಪ್ಪಿರುವ ಶಂಕೆ
Photo: twitter/ChannelNewsAsia
ಬಾನ್ಯುಮಾಸ್: ಇಂಡೊನೇಶದ ಜಾವಾ ದ್ವೀಪದಲ್ಲಿ ಅಕ್ರಮ ಚಿನ್ನದ ಗಣಿಯೊಂದರಲ್ಲಿ 8 ಮಂದಿ ಸಿಲುಕಿಕೊಂಡಿದ್ದು, ಅವರೆಲ್ಲರೂ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಐದು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದ್ದರೂ, ಗಣಿಯೊಳಗೆ ಸಿಲುಕಿರುವವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲವೆಂದು ವರದಿಗಳು ತಿಳಿಸಿವೆ.
ಜಾವಾ ದ್ವೀಪದಲ್ಲಿ ಪರವಾನಿಗೆ ರಹಿತ ಚಿನ್ನದ ಗಣಿಗಳು ಹಲವೆಡೆ ಕಾರ್ಯಾಚರಿಸುತ್ತಿದ್ದು ಅವು ಸುರಕ್ಷತಾ ನಿಯಮಗಳನ್ನು ಪಾಲಿಸದೆ ಇರುವುದರಿಂದ ಅವುಗಳಲ್ಲಿ ಆಗಾಗ್ಗೆ ಅವಘಡದ ಪ್ರಕರಣಗಳು ವರದಿಯಾಗುತ್ತಿವೆ.
ಮಧ್ಯ ಜಾವಾದ ಪಾನ್ಕುರೆಡಾಂಗ್ ಗ್ರಾಮದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಚಿನ್ನದ ಗಣಿಯಲ್ಲಿ ಈ ದುರಂತ ನಡೆದಿದೆ. ಕಾರ್ಮಿಕರು ಗಣಿಯಲ್ಲಿನ 60 ಮೀಟರ್ ಆಳದಲ್ಲಿ ಅಗೆಯುತ್ತಿದ್ದಾಗ, ಹಠಾತ್ತನೆ ನೀರು ಉಕ್ಕಿ ಹರಿದುಬಂದುದರಿಂದ ದುರಂತ ಸಂಭವಿಸಿದೆ.
ಗಣಿಯೊಳಗೆ ತುಂಬಿರುವ ನೀರನ್ನು ಹೊರತೆಗೆಯಲು ರಕ್ಷಣಾ ತಂಡಗಳು ನೀರಿನ ಪಂಪ್ಗಳನ್ನು ಬಳಸುತ್ತಿವೆ ಹಾಗೂ ಗಣಿಯಲ್ಲಿ ತುಂಬಿಕೊಂಡಿರುವ ನೀರನ್ನು ಪಕ್ಕದ ಅಣೆಕಟ್ಟಿಗೆ ಹರಿದುಹೋಗುವಂತೆ ಮಾಡಲು ಯತ್ನಿಸುತ್ತಿದ್ದಾರೆ. ಆದರೂ ರವಿವಾರವೂ ಗಣಿಯಲ್ಲಿ ನೀರು ತುಂಬಿಕೊಂಡಿತ್ತೆಂದು ಮೂಲಗಳು ತಿಳಿಸಿವೆ.