ಇಸ್ರೇಲ್ ವಿರುದ್ಧ ಒಗ್ಗೂಡಲು ವಿಶ್ವಸಂಸ್ಥೆಗೆ ಆಗ್ರಹ
ಗಾಝಾ ಶಾಲೆಗೆ ದಾಳಿಯನ್ನು ಖಂಡಿಸಿದ ಇಂಡೋನೇಶ್ಯಾ, ಮಲೇಶ್ಯಾ
ಸಾಂದರ್ಭಿಕ ಚಿತ್ರ (PTI)
ಜಕಾರ್ತ : ಗಾಝಾದಲ್ಲಿ ನಾಗರಿಕರ ಸಾಮೂಹಿಕ ಹತ್ಯೆಯನ್ನು ನಿಲ್ಲಿಸಲು ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಸದಸ್ಯ ದೇಶಗಳು ಒಗ್ಗೂಡಬೇಕು ಎಂದು ಇಂಡೋನೇಶ್ಯಾ ಮತ್ತು ಮಲೇಶ್ಯಾ ಆಗ್ರಹಿಸಿವೆ.
ನಿರಾಶ್ರಿತ ಫೆಲೆಸ್ತೀನೀಯರು ಆಶ್ರಯ ಪಡೆದಿದ್ದ ಗಾಝಾದ ಶಾಲೆಯ ಮೇಲೆ ಶನಿವಾರ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಶಾಲೆಯಲ್ಲಿ ಹಮಾಸ್ ಸಶಸ್ತ್ರ ಪಡೆಯ ಕಮಾಂಡ್ ಸೆಂಟರ್ ಕಾರ್ಯಾಚರಿಸುತ್ತಿತ್ತು ಎಂದು ಇಸ್ರೇಲ್ ಪ್ರತಿಪಾದಿಸಿತ್ತು. ಅಮಾಯಕ ನಾಗರಿಕರನ್ನು ಗುರಿಯಾಗಿಸಿ ನಡೆದಿರುವ ದಾಳಿಗೆ ಇಸ್ರೇಲನ್ನು ಹೊಣೆಯಾಗಿಸಬೇಕು. ಇಸ್ರೇಲ್ನ ಜಗಳಗಂಟ ಮನೋಸ್ಥಿತಿಯನ್ನು ಅಂತರರಾಷ್ಟ್ರೀಯ ಸಮುದಾಯ ಇನ್ನುಮುಂದೆ ಸಹಿಸಿಕೊಳ್ಳಬಾರದು ಮತ್ತು ಒಪ್ಪಬಾರದು ಎಂದು ಮಲೇಶ್ಯಾದ ವಿದೇಶಾಂಗ ಸಚಿವಾಲಯ ರವಿವಾರ ಆಗ್ರಹಿಸಿದೆ.
ಅಮಾಯಕ ನಾಗರಿಕರ ಹತ್ಯೆಯನ್ನು ನಿಲ್ಲಿಸುವಂತೆ ಇಸ್ರೇಲ್ನ ಮೇಲೆ ಒತ್ತಡ ಹೇರಲು, ಮತ್ತು ಇಸ್ರೇಲ್ಗೆ ಶಸ್ತ್ರಾಸ್ತ್ರ ಪೂರೈಸುವುದನ್ನು ನಿಲ್ಲಿಸುವ ಮೂಲಕ ನರಮೇಧವನ್ನು ತಡೆಯಲು ಇಸ್ರೇಲ್ನ ಮಿತ್ರರು ಮುಂದಾಗಬೇಕು. ಶಾಶ್ವತ ಕದನ ವಿರಾಮ ಜಾರಿಗೊಳಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಲೇಶ್ಯಾ ಆಗ್ರಹಿಸಿದೆ.
ತನಗೆ ಶಾಂತಿ ಸ್ಥಾಪನೆಯ ಬಯಕೆಯಿಲ್ಲ ಎಂಬುದನ್ನು ಇಸ್ರೇಲ್ ಈಗಾಗಲೇ ತೋರಿಸಿದೆ. ಆದ್ದರಿಂದ ಇಸ್ಲಾಮಿಕ್ ಸಹಕಾರ ಸಂಘಟನೆಯ 57 ಸದಸ್ಯ ದೇಶಗಳು ಒಂದುಗೂಡಿ ವಿಶ್ವಸಂಸ್ಥೆಯ ಇತರ ಸದಸ್ಯದೇಶಗಳ ಬೆಂಬಲ ಪಡೆದು, ಜೂನ್ನಲ್ಲಿ ಅನುಮೋದಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಕ್ಕೆ ಬದ್ಧವಾಗಿರುವಂತೆ ಇಸ್ರೇಲ್ ಅನ್ನು ಆಗ್ರಹಿಸಬೇಕು ಎಂದು ಮಲೇಶ್ಯಾ ಆಗ್ರಹಿಸಿದೆ. ಗಾಝಾದ ಶಾಲೆಯ ಮೇಲೆ ಇಸ್ರೇಲ್ ನಡೆಸಿರುವ ದಾಳಿಯ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಮಗ್ರ ತನಿಖೆ ನಡೆಸುವಂತೆ ಹೆಚ್ಚುತ್ತಿರುವ ಆಗ್ರಹಕ್ಕೆ ಇಂಡೋನೇಶ್ಯಾ ಧ್ವನಿಗೂಡಿಸಿದೆ. ಇಸ್ರೇಲ್ ನಡೆಸುತ್ತಿರುವ ಮಾನವೀಯತೆಯ ವಿರುದ್ಧದ ಅಪರಾಧ ಮತ್ತು ನರಮೇಧವನ್ನು ತಡೆಯಲು ಅಂತರರಾಷ್ಟ್ರೀಯ ಸಮುದಾಯ ಒಗ್ಗೂಡಬೇಕು ಎಂದು ಇಂಡೋನೇಶ್ಯಾದ ವಿದೇಶಾಂಗ ಸಚಿವಾಲಯ ಆಗ್ರಹಿಸಿದೆ.