ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಫೆಲಸ್ತೀನ್ ಪ್ರಜೆಗೆ ಸಹಾನುಭೂತಿ ತೋರಿದ ಇಂಡೋನೇಶಿಯಾ ಪೈಲಟ್
ಗಾಝಾ: ಇಸ್ರೇಲ್-ಫೆಲೆಸ್ತೀನ್ ನಡುವೆ ಯುದ್ಧ ಮುಂದುವರಿಯುತ್ತಿರುವ ನಡುವಯೇ ಇಂಡೋನೇಶಿಯಾ ಪೈಲಟ್ ಒಬ್ಬರು ತಮ್ಮ ಕರ್ತವ್ಯವವನ್ನೂ ಮೀರಿ ಫೆಲಸ್ತೀನ್ ಪ್ರಜೆಯೊಬ್ಬರಿಗೆ ತೋರಿರುವ ಸಹಾನುಭೂತಿ ಹಾಗೂ ಒಗ್ಗಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೊ ಪ್ರತಿಕೂಲ ಪರಿಸ್ಥಿತಿಯಲ್ಲಿ ಮನುಷ್ಯರ ನಡುವೆ ಪರಸ್ಪರ ಹೇಗೆ ನಂಟು ಬೆಳೆಯುತ್ತದೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿದೆ ಎಂದು ndtv.com ವರದಿ ಮಾಡಿದೆ.
ಆ ವಿಡಿಯೊದಲ್ಲಿ, ಇಂಡೋನೇಶಿಯಾ ಪೈಲಟ್ ಪ್ರಯಾಣಿಕರೊಬ್ಬರನ್ನು ಉದ್ದೇಶಿಸಿ, ನೀವು ಫೆಲಸ್ತೀನ್ ಪ್ರಜೆಯೆ ಎಂದು ಪ್ರಶ್ನಿಸುತ್ತಾರೆ. ಅದಕ್ಕವರು ಹೌದು ಎಂದು ಉತ್ತರಿಸುತ್ತಾರೆ. ಆಗ ಆ ಪ್ರಯಾಣಿಕನನ್ನು ಅಪ್ಪಿಕೊಳ್ಳುವ ಪೈಲಟ್, "ನಮಗೆ ಶಾಂತಿ ದೊರೆಯಲಿ; ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಸಂತೈಸುತ್ತಾರೆ.
ಈ ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು, "ಮನುಷ್ಯರು ಮಾತ್ರ ಮನುಷ್ಯರನ್ನು ಪಡೆಯುತ್ತಾರೆ. ಸರ್ಕಾರಗಳು ನಮ್ಮ ಧ್ವನಿಯಾಗುತ್ತವೆ ಎಂದು ಅವನ್ನು ಅಲಂಬಿಸುತ್ತಾ ಕೂರಲು ಸಾಧ್ಯವಿಲ್ಲ. ವಿಶ್ವಾದ್ಯಂತ ಜನರು ಕದನ ವಿರಾಮಕ್ಕೆ ಆಗ್ರಹಿಸುತ್ತಾ, ಹಿಂಸಾಚಾರವನ್ನು ಅಂತ್ಯಗೊಳಿಸಬೇಕು ಎಂದು ಒತ್ತಾಯಿಸುತ್ತಿರುವಾಗ ನಮ್ಮ ಪ್ರಜಾತಂತ್ರಗಳು ವಿಫಲವಾಗಿವೆ. ಆದರೆ, ಅದನ್ನು ಕೇಳಲು ನಮ್ಮ ನಾಯಕರು ಸಿದ್ಧರಿಲ್ಲ. ಎದ್ದೇಳಿ ಜನರೆ, ಎದ್ದೇಳಿ!" ಎಂದು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರರು, "ಕೇವಲ ಮನುಷ್ಯರು ಮಾತ್ರ ಮನುಷ್ಯರನ್ನು ಪಡೆಯುತ್ತಾರೆ! ಹೃದಯಸ್ಪರ್ಶಿ" ಎಂದು ಪ್ರತಿಕ್ರಿಯಿಸಿದ್ದಾರೆ.