ಭಾರತದ ಕಾರ್ಟೂನಿಸ್ಟ್ ರಚಿತಾ ತನೇಜಾಗೆ ಅಂತರಾಷ್ಟ್ರೀಯ ಪ್ರಶಸ್ತಿ
Cartoonist Rachita Taneja. Photo: Facebook/Rachita Taneja
ಜಿನೆವಾ : ಭಾರತದ ಕಾರ್ಟೂನಿಸ್ಟ್(ವ್ಯಂಗ್ಯಚಿತ್ರ ಕಲಾವಿದೆ) ರಚಿತಾ ತನೆಜಾ ಹಾಗೂ ಹಾಂಕಾಂಗ್ನ ಕಾರ್ಟೂನಿಸ್ಟ್ ಜುಂಜಿ ಅವರಿಗೆ ಪ್ರತಿಷ್ಟಿತ `ಕೋಫಿ ಅನ್ನಾನ್ ಕರೇಜ್ ಇನ್ ಕಾರ್ಟೂನಿಂಗ್' ಪುರಸ್ಕಾರವನ್ನು ಶುಕ್ರವಾರ(ಮೇ 3) ಅಂತರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ದಿನದಂದು ನೀಡಲಾಗಿದೆ.
ರಚಿತಾ ಅವರು `ಸ್ಯಾನಿಟರಿ ಪ್ಯಾನೆಲ್ಸ್' ಎಂಬ ಆನ್ಲೈನ್ ವೆಬ್ಕಾಮಿಕ್ಸ್(ಅಂತರ್ಜಾಲದಲ್ಲಿ ಪ್ರಕಟವಾಗುವ ವ್ಯಂಗ್ಯಚಿತ್ರ) ವೇದಿಕೆಯನ್ನು ನಿರ್ವಹಿಸುತ್ತಿದ್ದು ಇದರಲ್ಲಿ ದೌರ್ಜನ್ಯ, ಕಿರುಕುಳ, ಸರ್ವಾಧಿಕಾರ ಮುಂತಾದ ವಿಷಯಗಳ ಬಗ್ಗೆ ವಿಡಂಬನಾತ್ಮಕ ಕಾರ್ಟೂನ್ ರಚಿಸುವ ಕಾರಣ ಅವರ ವಿರುದ್ಧ ಭಾರತದ ಆಡಳಿತಾರೂಢ ಬಿಜೆಪಿಯ ಯುವಘಟಕ ದೂರು ದಾಖಲಿಸಿದೆ.
ಹಾಂಕಾಂಗ್ನಲ್ಲಿ ಚೀನಾವು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿರುವುದನ್ನು ಟೀಕಿಸಿ ವಿಡಂಬನಾತ್ಮಕ ಕಾರ್ಟೂನ್ ರಚಿಸಿದ್ದ ಜುಂಜಿ ಅವರನ್ನು 2023ರಲ್ಲಿ ಪತ್ರಿಕೆಯ ಕೆಲಸದಿಂದ ವಜಾಗೊಳಿಸಲಾಗಿದೆ. ` ಸ್ವಾತಂತ್ರ್ಯ ಮತ್ತು ಹೋರಾಟದಲ್ಲಿ ಮಹಿಳೆಯರ ಪ್ರಮುಖ ಪಾತ್ರ. ಜಾಗತಿಕವಾಗಿ ಮಹಿಳಾ ವ್ಯಂಗ್ಯಚಿತ್ರಕಾರರು ಎದುರಿಸುತ್ತಿರುವ ಸವಾಲುಗಳು' ಎಂಬುದು ಈ ವರ್ಷದ ಪ್ರಶಸ್ತಿ ಮತ್ತು ವ್ಯಂಗ್ಯಚಿತ್ರ ಪ್ರದರ್ಶನದ ಪ್ರಮುಖ ವಿಷಯವಾಗಿದೆ.