ಭಾರತ ವಿರೋಧಿ ಅಭಿಯಾನಗಳ ತನಿಖೆ: ಕೆನಡಾ ಘೋಷಣೆ
Photo : ಕೆನಡಾದ ಧ್ವಜ | PTI
ಟೊರಂಟೊ: ಕೆನಡಾದಲ್ಲಿ ಭಾರತೀಯ ಹಿರಿಯ ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಭಾರತ-ವಿರೋಧಿ ಪೋಸ್ಟರ್ ಅಭಿಯಾನಗಳ ಬಗ್ಗೆ ಕೆನಡಾ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ವ್ಯಾಂಕೋವರ್ನಲ್ಲಿ ಭಾರತೀಯ ಕಾನ್ಸುಲೇಟ್ ಕಚೇರಿಯ ಹೊರಗಡೆ ಮಂಗಳವಾರ ಭಾರತ ವಿರೋಧಿ ಪೋಸ್ಟರ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೆನಡಾ ತನಿಖೆ ಆರಂಭಿಸಿದೆ. `ಕೆನಡಾದಲ್ಲಿ ಹಿಂಸೆಯ ಪ್ರಚೋದನೆಗೆ ಸ್ಥಳವಿಲ್ಲ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ವಿರುದ್ಧ ಬೆದರಿಕೆಗಳಿಗೆ ಸಂಬಂಧಿಸಿದಂತೆ ಆನ್ಲೈನ್ ವೀಡಿಯೊವನ್ನು ಪ್ರಸಾರ ಮಾಡಿದ ಬಳಿಕ ಕಾನೂನು ಜಾರಿ ಇಲಾಖೆ ಕಾರ್ಯಪ್ರವೃತ್ತವಾಗಿದೆ' ಎಂದು ಕೆನಡಾದ ಒಳಾಡಳಿತ ಇಲಾಖೆ ಹೇಳಿದೆ.
ಕಾನ್ಸುಲೇಟ್ ಕಚೇರಿಯ ಹೊರಗಡೆ ಅಂಟಿಸಲಾದ ಪೋಸ್ಟರ್ಗೂ ವ್ಯಾಂಕೋವರ್ ವಲಯದಲ್ಲಿ ಈ ಹಿಂದೆ ಕಂಡುಬಂದ ಪೋಸ್ಟರ್ಗಳಿಗೂ ಸಾಮ್ಯತೆಯಿದೆ. ಈ ಪೋಸ್ಟರ್ಗಳಲ್ಲಿ ಕೆನಡಾದಲ್ಲಿನ ಭಾರತದ ಹಿರಿಯ ರಾಜತಾಂತ್ರಿಕರ ಫೋಟೋ ಮತ್ತು ಹೆಸರಿದ್ದು ಅದರ ಕೆಳಗಡೆ `ವಾಂಟೆಡ್' ಎಂದು ಬರೆಯಲಾಗಿದೆ. ಬಿಗಿ ಭದ್ರತೆಯ ಕಾನ್ಸುಲೇಟ್ ಕಚೇರಿಯ ಆವರಣದೊಳಗೆ ಪೋಸ್ಟರ್ ಅಂಟಿಸಿರುವ ಬಗ್ಗೆ ಭಾರತ ತನ್ನ ತೀವ್ರ ಆಕ್ಷೇಪ ಮತ್ತು ಕಳವಳವನ್ನು ಕೆನಡಾ ಸರಕಾರಕ್ಕೆ ಸಲ್ಲಿಸಿತ್ತು. ಆಗಸ್ಟ್ 15ರಂದು ಕೆನಡಾದಲ್ಲಿನ ಭಾರತದ ರಾಯಭಾರಿ ಕಚೇರಿ, ಕಾನ್ಸುಲೇಟ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಖಾಲಿಸ್ತಾನ್ ಬೆಂಬಲಿಗ ಸಂಘಟನೆ `ಸಿಖ್ಸ್ ಫಾರ್ ಜಸ್ಟಿಸ್' ಹೇಳಿಕೆ ನೀಡಿದ ಬಳಿಕವೂ ಇಲ್ಲಿ ಭದ್ರತಾ ಲೋಪ ನಡೆದಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.