ಅಮೆರಿಕ-ಬ್ರಿಟನ್ ಜಂಟಿ ನೆಲೆಯ ಮೇಲೆ ದಾಳಿ: ಇರಾನ್ ಬೆದರಿಕೆ
ಟ್ರಂಪ್ ಬೆದರಿಕೆಗೆ ಬಗ್ಗುವುದಿಲ್ಲ: ಖಾಮಿನೈ ಘೋಷಣೆ

ಆಯತುಲ್ಲಾ ಆಲಿ ಖಾಮಿನೈ | PC : PTI
ಟೆಹ್ರಾನ್: ಇರಾನ್ ಗುರಿಯಾಗಿಸಿ ಅಮೆರಿಕ ದಾಳಿ ನಡೆಸುವ ಮೊದಲೇ ಹಿಂದೂ ಮಹಾಸಾಗರದಲ್ಲಿರುವ ಅಮೆರಿಕ- ಬ್ರಿಟನ್ ಜಂಟಿ ಸೇನಾನೆಲೆ ಡಿಯೆಗೊ ಗ್ರಾಸಿಯಾದ ಮೇಲೆ ಮುನ್ನೆಚ್ಚರಿಕೆಯ ದಾಳಿ ನಡೆಸುವುದಾಗಿ ಇರಾನ್ ಪ್ರತಿಜ್ಞೆ ಮಾಡಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ಟೆಲಿಗ್ರಾಫ್' ವರದಿ ಮಾಡಿದೆ.
ಬ್ರಿಟನ್ ಒಡೆತನದ ಡಿಯೆಗೊ ಗಾರ್ಸಿಯಾವು ಚಾಗೋಸ್ ದ್ವೀಪ ಸಮುದಾಯದಲ್ಲಿನ ಪ್ರಮುಖ ದ್ವೀಪವಾಗಿದೆ. ಇರಾನ್ ಮೇಲೆ ದಾಳಿ ನಡೆಸುವ ಟ್ರಂಪ್ ಬೆದರಿಕೆ ಇನ್ನಷ್ಟು ಗಂಭೀರವಾದರೆ ಬ್ರಿಟನ್-ಅಮೆರಿಕ ಜಂಟಿ ಸೇನಾನೆಲೆಯನ್ನು ಗುರಿಯಾಗಿಸಿ ಮುನ್ನೆಚ್ಚರಿಕೆ ದಾಳಿ ನಡೆಸುವಂತೆ ಮಿಲಿಟರಿ ಕಮಾಂಡರ್ ಗಳಿಗೆ ಸೂಚಿಸಲಾಗಿದೆ ಎಂದು ಇರಾನ್ ನ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಉಪಗ್ರಹಗಳಿಂದ ಲಭಿಸಿದ ಚಿತ್ರಗಳ ಪ್ರಕಾರ, ಕಳೆದ ವಾರ ಈ ಸೇನಾನೆಲೆಗೆ ಕನಿಷ್ಠ 3 ಬಿ-2 ಸ್ಪಿರಿಟ್ ಜೆಟ್(ಅತ್ಯಾಧುನಿಕ ಬಾಂಬರ್ ವಿಮಾನಗಳು) ಆಗಮಿಸಿವೆ. ಸೇನಾ ನೆಲೆಯಲ್ಲಿ ಬಿ-1 ಲ್ಯಾನ್ಸರ್, ಬಿ-2 ಸ್ಪಿರಿಟ್ ಮತ್ತು ಬಿ-52 ಸ್ಟ್ರಟೊಫೋಟ್ರೆಸ್ ಬಾಂಬರ್ ಗಳು ಹಾಗೂ ಸುಮಾರು 4 ಸಾವಿರ ಮಿಲಿಟರಿ ಸಿಬ್ಬಂದಿಗಳಿದ್ದಾರೆ.
ಮುನ್ನೆಚ್ಚರಿಕೆ ನೀಡುವ ಕ್ರಮವಾಗಿ ಡಿಯೆಗೊ ಗಾರ್ಸಿಯಾದತ್ತ ಕ್ಷಿಪಣಿ ದಾಳಿ ನಡೆಸಲು ಕೆಲವರು ಸಲಹೆ ನೀಡಿದ್ದು ಇದನ್ನು ಪರಿಶೀಲಿಸಲಾಗುತ್ತಿದೆ. ಸೇನಾ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸುವ ಬದಲು, ಸೇನಾ ನೆಲೆಯ ಬಳಿಯಿರುವ ಸಮುದ್ರಕ್ಕೆ ಅಪ್ಪಳಿಸುವಂತೆ ಕ್ಷಿಪಣಿ ದಾಳಿ ನಡೆಸಿ ನಮ್ಮ ಸಾಮಥ್ರ್ಯದ ಬಗ್ಗೆ ಸಂದೇಶ ರವಾನಿಸುವ ಯೋಜನೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ಇರಾನ್ ನ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಗರಿಷ್ಠ ಒತ್ತಡವನ್ನು ಮುಂದುವರಿಸಲಾಗುವುದು. ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ನಿಯಂತ್ರಿಸುವ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಆ ದೇಶದ ಮೇಲೆ ಬಾಂಬ್ ದಾಳಿಯ ಸಾಧ್ಯತೆಯನ್ನೂ ತಳ್ಳಿಹಾಕಲಾಗದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಎಚ್ಚರಿಕೆ ನೀಡಿದ್ದರು. ಟ್ರಂಪ್ ಅವರ ಬೆದರಿಕೆಗೆ ನಮ್ಮ ಪ್ರತಿಕ್ರಿಯೆ ಶಬ್ದಗಳಲ್ಲಿ ಅಲ್ಲ, ಕ್ರಿಯೆಗಳ ಮೂಲಕ ವ್ಯಕ್ತವಾಗಲಿದೆ. ಈ ವಲಯದಲ್ಲಿರುವ ಎಲ್ಲಾ ಸೇನಾ ನೆಲೆಗಳೂ ನಮ್ಮ ಕ್ಷಿಪಣಿಗಳ ವ್ಯಾಪ್ತಿಯಲ್ಲಿವೆ. ಕ್ಷಿಪಣಿಗಳನ್ನು ಲೋಡ್ ಮಾಡಲಾಗಿದ್ದು ಇರಾನ್ಗೆ ಯಾವ ದಿಕ್ಕಿನಿಂದ ಬೆದರಿಕೆ ಎದುರಾದರೂ ಗುರಿಯಾಗಿಸಲು ಸಿದ್ಧವಾಗಿರಿಸಲಾಗಿದೆ. ನಮಗೆ ದೊರಕಿದ ವರದಿ ಪ್ರಕಾರ, ಎಲ್ಲಾ ಕ್ಷಿಪಣಿ ಲಾಂಚರ್ ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ಮತ್ತು ಪರಮಾಣು ತಾಣಗಳಿಗೆ ಭದ್ರತೆ ಹೆಚ್ಚಿಸುವಂತೆ ಕಮಾಂಡರ್ ಗಳಿಗೆ ಸೂಚಿಸಲಾಗಿದೆ' ಎಂದು ಇರಾನ್ ನ ಅಧಿಕಾರಿ ಹೇಳಿದ್ದಾರೆ.