ಅಮೆರಿಕದ ನೀರಿನ ವ್ಯವಸ್ಥೆಯ ಮೇಲೆ ಇರಾನ್, ರಶ್ಯದ ಸೈಬರ್ ದಾಳಿ : ಎಚ್ಚರಿಕೆ
ಸಾಂದರ್ಭಿಕ ಚಿತ್ರ: PTI
ನ್ಯೂಯಾರ್ಕ್: ಅಮೆರಿಕದಾದ್ಯಂತದ ನೀರು ಪೂರೈಕೆ ವ್ಯವಸ್ಥೆಯ ವಿರುದ್ಧದ ಸೈಬರ್ ದಾಳಿ ಪ್ರಕರಣ ಹೆಚ್ಚು ನಿರಂತರ ಮತ್ತು ತೀವ್ರವಾಗಿದೆ ಎಂದು `ದಿ ಎನ್ವೈರನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ(ಇಪಿಎ) ಎಚ್ಚರಿಕೆ ನೀಡಿದ್ದು ದೇಶದ ಕುಡಿಯುವ ನೀರನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಕಳೆದ ವರ್ಷ ಫೆಡರಲ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದ ಸಂಸ್ಥೆಗಳಲ್ಲಿ ಸುಮಾರು 70%ದಷ್ಟು ಸಂಸ್ಥೆಗಳು ಸೈಬರ್ ದಾಳಿ ಅಥವಾ ಇತರ ದುಷ್ಕೃತ್ಯಗಳ ವಿರುದ್ಧ ಕೈಗೊಳ್ಳಬೇಕಿರುವ ಭದ್ರತಾ ಮಾನದಂಡಗಳನ್ನು ಉಲ್ಲಂಘಿಸಿವೆ ಎಂದು ಇಪಿಎ ಹೇಳಿದೆ. ರಶ್ಯ ಮತ್ತು ಚೀನಾಕ್ಕೆ ಸಂಯೋಜನೆಗೊಂಡಿರುವ ಗುಂಪುಗಳು ನಡೆಸಿರುವ ಇತ್ತೀಚಿನ ಸೈಬರ್ ದಾಳಿಗಳು ಸಣ್ಣಪುಟ್ಟ ಸಂಸ್ಥೆಗಳನ್ನು ಗುರಿಯಾಗಿಸಿರುವುದರಿಂದ ಸಣ್ಣ ನೀರು ಪೂರೈಕೆ ಏಜೆನ್ಸಿಗಳೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಆಗ್ರಹಿಸಿದ್ದಾರೆ.
ಸಣ್ಣ ನೀರು ಪೂರೈಕೆ ಸಂಸ್ಥೆಗಳು ಕಂಪ್ಯೂಟರ್ ವ್ಯವಸ್ಥೆಯ ಪಾಸ್ವರ್ಡ್ ಬಗ್ಗೆ ಜಾಗೃತೆ ವಹಿಸಬೇಕು. ಕೆಲಸ ತೊರೆಯುವ ಸಿಬ್ಬಂದಿ ಆ ಬಳಿಕವೂ ಸಂಸ್ಥೆಯ ಇಂಟರ್ನೆಟ್ ಜಾಲದೊಳಗೆ ಪ್ರವೇಶಿಸುವುದಕ್ಕೆ ಅವಕಾಶ ಇರಬಾರದು. ನೀರು ಶುದ್ಧೀಕರಣ ಸ್ಥಾವರ, ನೀರು ಪೂರೈಕೆ ವ್ಯವಸ್ಥೆಯನ್ನು ನಿರ್ವಹಿಸಲು ಕಂಪ್ಯೂಟರ್ ಸಾಫ್ಟ್ ವೇರ್ ಅನ್ನು ಅವಲಂಬಿಸಿರುವುದರಿಂದ ಮಾಹಿತಿ ತಂತ್ರಜ್ಞಾನ ಮತ್ತು ಪ್ರಕ್ರಿಯೆಯ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಇಪಿಎ ಹೇಳಿದೆ.