ಇಸ್ರೇಲಿ ಗುಪ್ತಚರ ಕೇಂದ್ರ ಕಚೇರಿಯ ಮೇಲೆ ಇರಾನ್ ದಾಳಿ
ಟೆಹರಾನ್: ಇರಾನ್ ನ ರೆವಲ್ಯೂಶನರಿ ಗಾರ್ಡ್ ಸಂಘಟನೆ ಸಿರಿಯಾ ಮತ್ತು ಸ್ವಾಯತ್ತ ಖುರ್ದಿಸ್ತಾನ್ ಪ್ರದೇಶದ ಹಲವೆಡೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಸರ್ಕಾರದ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.
ದಾಳಿಕೋರರು "ಇರಾಕಿ ಖುರ್ದಿಸ್ತಾನದ ಅರ್ಬಿಲ್ ನಲ್ಲಿ ಒಂದು ಗುಪ್ತಚರ ಕೇಂದ್ರ ಕಚೇರಿ"ಯನ್ನು ಧ್ವಂಸಗೊಳಿಸಿದ್ದು, ಇರಾನ್ ವಿರೋಧಿ ಸಮೂಹದ ಮೇಲೂ ದಾಳಿ ನಡೆಸಲಾಗಿದೆ" ಎಂದು ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾಪ್ಸ್ ಹೇಳಿಕೆಯನ್ನು ಉಲ್ಲೇಖಿಸಿ ಇರ್ನಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಾಳಿಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಇರಾಕಿ ಖುರ್ದಿಸ್ತಾನ ಭದ್ರತಾ ಮಂಡಳಿ ಹೇಳಿದೆ. ಖ್ಯಾತ ಉದ್ಯಮಿ ಪೆಶ್ರಾವ್ ಡಿಝಾಯೀ ಸೇರಿದಂತೆ ಹಲವು ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಖುರ್ದಿಸ್ತಾನ ಡೆಮಾಕ್ರಟಿಕ್ ಪಾರ್ಟಿ ಹೇಳಿದೆ.
ಐಆರ್ ಜಿಸಿ ಸಿರಿಯಾದ ಗುರಿಗಳ ಮೇಲೆ ಸಿಡಿತಲೆ ಕ್ಷಿಪಣಿ ದಾಳಿಯನ್ನೂ ನಡೆಸಿದ್ದು, ಇತ್ತೀಚಿನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಮಾಂಡರ್ ಗಳು ಮತ್ತು ಪ್ರಮುಖ ಮುಖಂಡರ ಸಮಾವೇಶ ಸ್ಥಳಗಳ ಮೇಲೆಯೂ ದಾಳಿ ನಡೆಸಲಾಗಿದೆ. ಅದರಲ್ಲೂ ಮುಖ್ಯವಾಗಿ ಇಸ್ಲಾಮಿಕ್ ಸ್ಟೇಟ್ ಗ್ರೂಪ್ ನ ಮೇಲೆ ದಾಳಿ ನಡೆದಿದೆ ಎಂಧು ಸೆಪಹ್ ನ್ಯೂಸ್ ಸರ್ವೀಸಸ್ ಸ್ಪಷ್ಟಪಡಿಸಿದೆ.
ಸ್ವಾಯತ್ತ ಖುರ್ದಿಸ್ತಾನ ಪ್ರದೇಶದ ಇಸ್ರೇಲಿ ಗುಪ್ತಚರ ಕೇಂದ್ರ ಕಚೇರಿ ಮೇಲೂ ದಾಳಿ ನಡೆಸಲಾಗಿದೆ ಎಂದು ಐಆರ್ಜಿಸಿ ಹೇಳಿದೆ. ಇದು ಬೇಹುಗಾರಿಕೆ ಕಾರ್ಯಾಚರಣೆ ಅಭಿವೃದ್ಧಿಪಡಿಸುವ ಹಾಗೂ ಉಗ್ರಗಾಮಿ ಯೋಜನೆ ರೂಪಿಸುವ ಕೇಂದ್ರವಾಗಿತ್ತು ಎಂದು ಸ್ಪಷ್ಟಪಡಿಸಿದೆ.