ಕಳೆದ 24 ಗಂಟೆ ಅವಧಿಯಲ್ಲಿ ಮೂರು ಸಮುದ್ರಗಳಲ್ಲಿ ಆರು ಹಡಗುಗಳ ಮೇಲೆ ಹೌದಿಗಳ ದಾಳಿ
PC : X
ಲೆಬನಾನ್: ಇರಾನ್ ಬೆಂಬಲಿತ ಹೌದಿ ಬಂಡುಕೋರರು ಕಳೆದ 24 ಗಂಟೆ ಅವಧಿಯಲ್ಲಿ ಕೆಂಪು ಸಮುದ್ರ, ಅರಬ್ಬೀ ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿ ಆರು ಹಡಗುಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ಹೌದಿಗಳು ಯೆಮೆನ್ನಲ್ಲಿ ಅಮೆರಿಕನ್ ಎಂಕ್ಯು-9 ರೀಪರ್ ಡ್ರೋನ್ ಅನ್ನು ಹೊಡೆದುರುಳಿಸಿದ್ದಾರೆನ್ನಲಾಗಿದೆ. ಯೆಮೆನ್ ಮರುಭೂಮಿಯಲ್ಲಿ ಹಾನಿಗೊಂಡಿರುವ ಡ್ರೋನ್ನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಾಳಿಗೊಳಗಾಗಿರುವ ಹಡಗುಗಳಲ್ಲಿ ಲಾಕ್ಸ್, ಮೊರಿಯಾ, ಸೀ ಲೇಡಿ, ಅಲ್ಬಾ, ಮಾಯರ್ಸ್ಕ್ ಹಾರ್ಟ್ಫೋರ್ಡ್ ಮತ್ತು ಮಿನ್ವೆರಾ ಆಂಟೋನಿಯಾ ಎಂದು ಗುರುತಿಸಲಾಗಿದೆ.
ಹೌದಿಗಳು ಮಂಗಳವಾರ ಮಾರ್ಷಲ್ ಐಲ್ಯಾಂಡ್ ಧ್ವಜವಿರುವ ಲಾಕ್ಸ್ ಹಡಗಿನ ಮೇಲೆ ಯೆಮೆನ್ ಕರಾವಳಿ ಸಮೀಪ ಸರಣಿ ದಾಳಿ ನಡೆಸಿದ್ದಾರೆ. ಕೆಂಪು ಸಮುದ್ರದಲ್ಲಿ ಮೊರಿಯಾ ಮತ್ತು ಸೀ ಲೇಡಿ ಮೇಲೆ ದಾಳಿ ನಡೆದರೆ ಅಲ್ಬಾ ಮತ್ತು ಮಾಯರ್ಸ್ಕ್ ಹಾರ್ಟ್ಫೋರ್ಡ್ ಮೇಲೆ ಅರಬ್ಬೀ ಸಮುದ್ರದಲ್ಲಿ ಹಾಗೂ ಮಿನೆರ್ವಾ ಆಂಟೋನಿಯಾ ಮೇಲೆ ಮೆಡಿಟರೇನಿಯನ್ನಲ್ಲಿ ದಾಳಿ ನಡೆಸಲಾಗಿದೆ ಎಂದು ಟೆಲಿವಿಷನ್ನಲ್ಲಿ ಪೂರ್ವ ರೆಕಾರ್ಡ್ ಮಾಡಿರುವ ಭಾಷಣದಲ್ಲಿ ಹೌದಿ ಮಿಲಿಟರಿ ವಕ್ತಾರ ಯಹ್ಯಾ ಸರೀ ಹೇಳಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳಿಗೆ ಸಂಬಂಧಿಸಿದಂತೆ ಫೆಲೆಸ್ತೀನ್ಗೆ ಬೆಂಬಲ ಸೂಚಿಸಿ ಹೌದಿಗಳು ನವೆಂಬರ್ ತಿಂಗಳಿನಿಂದ ಸಮುದ್ರದಲ್ಲಿ ದಾಳಿ ನಡೆಸುತ್ತಿದ್ದಾರೆ.