ಇಸ್ರೇಲ್ ಗುರಿಯಾಗಿಸಲು ಇರಾನ್ ನಿಂದ ಸ್ವೀಡನ್ ನ ಕ್ರಿಮಿನಲ್ ಗ್ಯಾಂಗ್ ನೇಮಕ : ವರದಿ
PC : NDTV
ಸ್ಟಾಕ್ಹೋಮ್ : ಇಸ್ರೇಲ್ ಹಾಗೂ ಇತರ ದೇಶಗಳ ವಿರುದ್ಧ ಹಿಂಸಾಚಾರದ ಕೃತ್ಯಗಳನ್ನು ನಡೆಸಲು ಮಕ್ಕಳನ್ನು ಒಳಗೊಂಡ ಸ್ವೀಡನ್ನ ಕ್ರಿಮಿನಲ್ ಗ್ಯಾಂಗ್ಗಳನ್ನು ಇರಾನ್ ನೇಮಿಸಿಕೊಳ್ಳುತ್ತಿದೆ ಎಂದು ಸ್ವೀಡನ್ನ ಗುಪ್ತಚರ ಇಲಾಖೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಸ್ವೀಡನ್ ರಾಜಧಾನಿ ಸ್ಟಾಕ್ಹೋಮ್ನಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಯ ಹೊರಗಡೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿ ಹಾಗೂ ಮೂರು ತಿಂಗಳ ಹಿಂದೆ ಇಸ್ರೇಲ್ ರಾಯಭಾರಿ ಕಚೇರಿಯ ಆವರಣದಲ್ಲಿ ಸ್ಫೋಟಗೊಳ್ಳದ ಸಜೀವ ಗ್ರೆನೇಡ್ ಪತ್ತೆಯಾದ ಪ್ರಕರಣಗಳನ್ನು ಉಲ್ಲೇಖಿಸಿರುವ ಗುಪ್ತಚರ ಇಲಾಖೆಯ ಅಧಿಕಾರಿಗಳು, ಇದು ಕ್ರಿಮಿನಲ್ ಗ್ಯಾಂಗ್ಗಳ ಕೃತ್ಯವಾಗಿರುವ ಸಾಧ್ಯತೆಯಿದೆ ಎಂದಿದ್ದಾರೆ.
ಇಸ್ರೇಲ್, ಇತರ ದೇಶಗಳು ಹಾಗೂ ಸ್ವೀಡನ್ನ ಜನತೆಯ ವಿರುದ್ಧ ಹಿಂಸಾಕೃತ್ಯಗಳನ್ನು ನಡೆಸಲು ಸ್ವೀಡನ್ನಲ್ಲಿನ ಕ್ರಿಮಿನಲ್ ಜಾಲವನ್ನು ಇರಾನಿನ ಆಡಳಿತ ಬಳಸಿಕೊಳ್ಳುತ್ತಿರುವುದನ್ನು ಸ್ವೀಡನ್ನ ಭದ್ರತಾ ಪಡೆ ಗಮನಿಸಿದೆ. ಈ ಹಿಂದೆಯೂ ಯುರೋಪ್ನ ಇತರ ದೇಶಗಳಲ್ಲಿ ತನ್ನ ವಿರುದ್ಧದ ಟೀಕೆ ಹಾಗೂ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಹಿಂಸೆಯ ಕ್ರಮಗಳನ್ನು ಇರಾನ್ ಈ ಹಿಂದೆಯೂ ಬಳಸಿದೆ. ಇದು ಜಾಗತಿಕವಾಗಿ ಹರಡಿದ ಪ್ರಾದೇಶಿಕ ಸಂಘರ್ಷವಾಗಿದೆ ಮತ್ತು ಈ ಸಂಘರ್ಷಕ್ಕೆ ಆಖಾಡವಾಗಿ ಸ್ವೀಡನ್ ಅನ್ನೂ ಸೇರ್ಪಡೆಗೊಳಿಸಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಸ್ವೀಡನ್ ಗುಪ್ತಚರ ಇಲಾಖೆಯ ಮುಖ್ಯಸ್ಥ ಡೇನಿಯಲ್ ಸ್ಟೆನ್ಲಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.