ಇರಾನ್:ಜೈಲಿನಲ್ಲೇ ನಿರಶನ ಆರಂಭಿಸಿದ ನೊಬೆಲ್ ಪುರಸ್ಕೃತ ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ
Photo : X / @vonderleyen
ಟೆಹರಾನ್: ಬಂಧನದಲ್ಲಿರುವ ಮಾನವಹಕ್ಕುಗಳ ಕಾರ್ಯಕರ್ತೆ, ಈ ವರ್ಷದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ನರ್ಗಿಸ್ ಮೊಹಮ್ಮದಿ ಅವರು ಸೋಮವಾರ ಕಾರಾಗೃಹದಲ್ಲೇ ನಿರಶನವನ್ನು ಆರಂಭಿಸಿದ್ದಾರೆ. ತನ್ನ ಹೃದಯದ ಅಪಧಮನಿಯ ಎರಡು ರಕ್ತನಾಳಗಳಲ್ಲಿ ಇರುವ ತಡೆಯನ್ನು ತೆಗೆಯಲು ಬೇಕಾದ ಶಸ್ತ್ರಕ್ರಿಯೆಯನ್ನು ನಡೆಸಲು ಅನುಮತಿ ನಿರಾಕರಿಸಿರುವುದನ್ನು ಪ್ರತಿಭಟಿಸಿ ಅವರು ನಿರಶನ ಆರಂಭಿಸಿದ್ದಾರೆಂದು ಆಕೆಯ ಕುಟುಂಬಿಕರು ತಿಳಿಸಿದ್ದಾರೆ.
ಸರಕಾರದ ವಿರುದ್ಧ ಅಪಪ್ರಚಾರವನ್ನು ಹರಡಿದ ಆರೋಪದಲ್ಲಿ ಕಳೆದ ವರ್ಷ ಮೊಹಮ್ಮದಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ ಜೈಲಿನಲ್ಲಿ ಇರುವಾಗಲೂ ಕೂಡಾ ಆಕೆ ಸರಕಾರವನ್ನು ಪ್ರಬಲವಾಗಿ ಟೀಕಿಸುವುದನ್ನು ಮುಂದುವರಿಸಿದ್ದಾರೆ.
‘‘ನಮಗೆ ತೀವ್ರ ಆತಂಕವಾಗುತ್ತಿದೆ. ನಿರಶನವನ್ನು ಕೈಗೊಂಡ ಕೈದಿಗಳು ಇರಾನ್ನ ಕಾರಾಗೃಹಗಳಲ್ಲಿ ಮೃತಪಟ್ಟ ಹಲವಾರು ನಿದರ್ಶನಗಳಿವೆ. ನನ್ನ ಪತ್ನಿಯ ಪ್ರಾಣ ಅಪಾಯದಲ್ಲಿದೆ’’ ಎಂದು ಮೊಹಮ್ಮದಿ ಅವರ ಪತಿ ತಾಗಿ ರಹಮಾನಿ ತಿಳಿಸಿದ್ದಾರೆ. ಹೇಳಿದ್ದಾರೆ.
ನರ್ಗಿಸ್ ಮೊಹಮ್ಮದಿ ಅವರಿಗೆ 2023ರಲ್ಲಿ ನೊಬೆಲ್ ಪುರಸ್ಕಾರವನ್ನು ಘೋಷಿಸಲಾಗಿತ್ತು. ಇರಾನ್ ಆಡಳಿತದಿಂದ ಮಹಿಳೆಯರ ಹಕ್ಕುಗಳ ದಮನದ ವಿರುದ್ಧ ಹಾಗೂ ಮಾನವಹಕ್ಕುಗಳ ಉತ್ತೇಜನಕ್ಕಾಗಿ ಆಕೆ ನಡೆಸುತ್ತಿರುವ ಹೋರಾಟಕ್ಕೆ ಈ ಪುರಸ್ಕಾರವನ್ನು ನೀಡಲಾಗಿದೆ.
ಡಿ̤10ರಂದು ನಡೆಯಲಿರುವ ನೊಬೆಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಕೆಯ ಪತಿ ಹಾಗೂ ಮಕ್ಕಳು ನಾರ್ವೆಯ ಒಸ್ಲೊಗೆ ತೆರಳಲು ಸಿದ್ಧತೆ ನಡೆಸುತ್ತಿರುವಾಗಲೇ ಅಹ್ಮದಿ ನಿರಶನವನ್ನು ಆರಂಭಿಸಿದ್ದಾರೆ.