ಇರಾನ್ ಸಂಸತ್ ಚುನಾವಣೆ : ಶಾಂತಿಯುತ ಮತದಾನ
Photo : PTI
ಟೆಹರಾನ್ : ಇರಾನ್ ಸಂಸತ್ ಚುನಾವಣೆಗೆ ಶುಕ್ರವಾರ ಮತದಾನ ಶಾಂತಿಯುತ ನಡೆಯಿತು. 2022ರಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಮಹ್ಸಾ ಅಮಿನಿ ಸಾವನ್ನಪ್ಪಿದ ಘಟನೆಯ ಬಳಿಕ ಇರಾನ್ನಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದ ಬಳಿಕ ಈ ಚುನಾವಣೆ ನಡೆಯುತ್ತಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ.
ಇರಾನ್ನ ಸಂಸತ್ನ 290 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಸುಮಾರು 15 ಸಾವಿರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಮೊದಲು ಇಸ್ಲಾಮಿಕ್ ಕಾನ್ಸುಲೇಟಿವ್ ಅಸೆಂಬ್ಲಿಎಂದು ಹೆಸರು ಹೊಂದಿದ್ದ ಇರಾನ್ ಸಂಸತ್ ನಾಲ್ಕು ವರ್ಷಗಳ ಅವಧಿಯನ್ನು ಹೊಂದಿದೆ. ಸಂಸತ್ನ ನಾಲ್ಕು ಸ್ಥಾನಗಳನ್ನು ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ. 290 ಸಂಸತ್ ಸ್ಥಾನಗಳಿಗಲ್ಲದೆ, ಪ್ರಭಾವಶಾಲಿಯಾದ ತಜ್ಞರ ಅಸೆಂಬ್ಲಿಯ 88 ಸ್ಥಾನಗಳಿಗೆ ಮತದಾನ ನಡೆಯಿತು.
ಇರಾನ್ ಸಂಸತ್ ಕಾರ್ಯಾಂಗವನ್ನು ನಿರ್ವಹಿಸುತ್ತದೆ, ಒಪ್ಪಂದಗಳು, ಆದೇಶಗಳಗೆ ಅಂಗೀಕರಿಸುವ ಹಾಗೂ ಇತರ ವಿಷಯಗಳನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಹೊಂದಿದೆ. ಆದರೆ ಆಡಳಿತದ ಮೇಲಿನ ಸಂಪೂರ್ಣ ಅಧಿಕಾರವು ಇರಾನಿನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಕೈಯಲ್ಲಿರುತ್ತದೆ.
ಕಳೆದ ಎರಡು ದಶಕಗಳಿಂದ ಕಟ್ಟಾ ಬಲಪಂಂಥೀಯರು ಇರಾನ್ ಸಂಸತ್ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆ.
ಈ ಮಧ್ಯೆ ಸುಧಾರಣಾವಾದಿ ರಾಜಕೀಯ ನಾಯಕರುಗಳು ಸಂಸಸ್ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಬಂಧನದಲ್ಲಿರುವ ನೊಬೆಲ್ ಪುರಸ್ಕೃತೆ ನರ್ಗಿಸ್ ಮೊಹಮ್ಮದ್ ಸೇರಿದಂತೆ ಹಲವು ಮುಖಂಡರು ಈ ಚುನಾವಣೆಯು ಒಂದು ವಂಚನೆ ಎಂದು ಬಣ್ಣಿಸಿವೆ. ನಾಳೆ ಮತಏಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ನಿರುದ್ಯೋಗದ ಸಮಸ್ಯೆ ಹಾಗೂ ಹಣದುಬ್ಬರವು ಮತದಾರರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆಯೆಂದು ಅಂತಾರಾಷ್ಟ್ರೀಯ ಸುದ್ದಿ ಮಾದ್ಯಮಮಗಳು ವರದಿ ಮಾಡಿವೆ.
ಮತದಾನವು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಕೊನೆಗೊಳ್ಳಬೇಕಿತ್ತಾದರೂ, ಅದನ್ನು 4.30ರವರೆಗೆ ವಿಸ್ತರಿಸಲಾಗಿತ್ತು.