ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಷ
ಇಬ್ರಾಹೀಂ ರಯೀಸಿ | PHOTO : NDTV
ಟೆಹರಾನ್ : ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕಠಿಣ ಪರಿಸ್ಥಿತಿಯಲ್ಲಿ ತುರ್ತು ಭೂ ಸ್ಪರ್ಷ ಮಾಡಿದೆ ಎಂದು ಇರಾನ್ನ ಸುದ್ದಿ ಸಂಸ್ಥೆ ತಸ್ನೀಮ್ ರವಿವಾರ ಎಕ್ಸ್ನಲ್ಲಿ ವರದಿ ಮಾಡಿದೆ.
ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ ಮಂಜಿನ ಪರಿಸ್ಥಿತಿಗಳಿಂದಾಗಿ ಹೆಲಿಕಾಪ್ಟರ್ ಕಠಿಣ ಪರಿಸ್ಥಿತಿಯಲ್ಲಿ ತುರ್ತು ಭೂ ಸ್ಪರ್ಷ ಮಾಡಿತು. ರಯೀಸಿಯವರಿದ್ದ ಹೆಲಿಕಾಪ್ಟರ್ನ ನಿಖರ ಸ್ಥಿತಿ ಏನು ಎಂಬುದು ಸ್ಪಷ್ಟವಾಗಿಲ್ಲ. ತುರ್ತು ಸಿಬ್ಬಂದಿಗೆ ಇಲ್ಲಿಯವರೆಗೆ ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ ಎಂದು ತಸ್ನೀಮ್ ತಿಳಿಸಿದೆ.
ರಯೀಸಿ, ತಬ್ರಿಜ್ನ ಅಯತೊಲ್ಲಾ ಅಲ್ ಹಶೆಮ್ ಇಮಾಮ್, ವಿದೇಶಾಂಗ ವ್ಯವಹಾರಗಳ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ನ ಗವರ್ನರ್ ಮಲಿಕ್ ರಹಮತಿ ಮತ್ತು ಇತರ ಹಲವರು ಹೆಲಿಕಾಪ್ಟರ್ನಲ್ಲಿದ್ದರು ಎನ್ನಲಾಗಿದೆ.
"ಇರಾನ್ ಅಧ್ಯಕ್ಷರ ಹೆಲಿಕಾಪ್ಟರ್ ತುರ್ತು ಭೂಸ್ಪರ್ಷ ಘಟನೆಗ ವರಿಯಾಗುತ್ತಿದ್ದಂತೆ, ರೆಡ್ ಕ್ರೆಸೆಂಟ್ ಪರಿಹಾರ ಪಡೆಗಳು ಮತ್ತು ಸಹಾಯಕ ಮಿಲಿಟರಿ, ಕಾನೂನು ಜಾರಿ ಪಡೆಗಳು ಹೆಲಿಕಾಪ್ಟರ್ ಅನ್ನು ಹುಡುಕಲು ವ್ಯಾಪಕ ಪ್ರಯತ್ನವನ್ನು ಪ್ರಾರಂಭಿಸಿವೆ" ಎಂದು ತಸ್ನೀಮ್ ವರದಿ ಮಾಡಿದೆ.
"ಈ ಹೆಲಿಕಾಪ್ಟರ್ನಲ್ಲಿ ಅಧ್ಯಕ್ಷರೊಂದಿಗಿದ್ದ ಕೆಲವರು ಸೆಂಟ್ರಲ್ ಹೆಡ್ಕ್ವಾರ್ಟರ್ಸ್ನೊಂದಿಗೆ ಸಂವಹನ ನಡೆಸಿದ್ದಾರೆ. ಇದು ಘಟನೆಯು ಯಾವುದೇ ಸಾವುನೋವುಗಳಿಲ್ಲದೆ ಕೊನೆಗೊಳ್ಳಬಹುದೆಂಬ ಎಂಬ ಭರವಸೆಯನ್ನು ಹುಟ್ಟುಹಾಕಿದೆ" ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ಇರಾನ್ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನೊಂದಿಗೆ ಬೆಂಗಾವಲು ಪಡೆ ಸಹಿತ ಒಟ್ಟು ಮೂರು ಹೆಲಿಕಾಪ್ಟರ್ ಗಳಿದ್ದವು. ಉಳಿದೆರಡು ಹೆಲಿಕಾಪ್ಟರ್ಗಳು ಮಂತ್ರಿಗಳು ಮತ್ತು ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದವು. ಆ ಎರಡೂ ಹೆಲಿಕಾಪ್ಟರ್ ಗಳು ತಲುಪಬೇಕಾದ ಗಮ್ಯಸ್ಥಾನಕ್ಕೆ ಸುರಕ್ಷಿತವಾಗಿ ತಲುಪಿದೆ ಎಂದು ಎಂದು ಸುದ್ದಿ ಸಂಸ್ಥೆ ತಸ್ನೀಮ್ ಉಲ್ಲೇಖಿಸಿದೆ.
ಸೌಜನ್ಯ : CNN