ವಾಣಿಜ್ಯ ಹಡಗಿನ ಮೇಲೆ ದಾಳಿ: ಅಮೆರಿಕ ಆರೋಪ ತಳ್ಳಿಹಾಕಿದ ಇರಾನ್
ಸಾಂದರ್ಭಿಕ ಚಿತ್ರ- Photo : twitter/Partisangirl
ಟೆಹ್ರಾನ್: ವಾಣಿಜ್ಯ ಹಡಗುಗಳ ಮೇಲೆ ಹೌದಿ ಬಂಡುಗೋರರು ನಡೆಸುತ್ತಿರುವ ದಾಳಿಯಲ್ಲಿ ಇರಾನ್ ಪಾತ್ರವಿದೆ ಎಂಬ ಅಮೆರಿಕದ ಆರೋಪವನ್ನು ಇರಾನ್ ತಳ್ಳಿಹಾಕಿದ್ದು, ಹೌದಿಗಳು ಅವರದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದೆ.
ಗಾಝಾದಲ್ಲಿ ಇಸ್ರೇಲ್-ಹಮಾಸ್ ಸಂಘರ್ಷ ಭುಗಿಲೆದ್ದಂದಿನಿಂದ ಯೆಮನ್ ನಲ್ಲಿ ಕಾರ್ಯಾಚರಿಸುತ್ತಿರುವ ಇರಾನ್ ಬೆಂಬಲಿತ ಹೌದಿ ಬಂಡುಗೋರರು ಕೆಂಪು ಸಮುದ್ರದಲ್ಲಿ ಸಂಚರಿಸುವ ವಾಣಿಜ್ಯ ನೌಕೆಗಳನ್ನು ಗುರಿಯಾಗಿಸಿ 100ಕ್ಕೂ ಅಧಿಕ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ. ಯೆಮನ್ ರಾಜಧಾನಿ ಸನಾ ಸೇರಿದಂತೆ ಆ ದೇಶದ ವಿಶಾಲ ಭಾಗವನ್ನು ನಿಯಂತ್ರಿಸುತ್ತಿರುವ ಹೌದಿಗಳಿಗೆ ಇರಾನ್ ಡ್ರೋನ್, ಕ್ಷಿಪಣಿಗಳು ಹಾಗೂ ಯುದ್ಧತಂತ್ರದ ನೆರವನ್ನು ಒದಗಿಸುತ್ತಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಶುಕ್ರವಾರ ಶ್ವೇತಭವನ ಸಾರ್ವಜನಿಕವಾಗಿ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ಸಹಾಯಕ ವಿದೇಶಾಂಗ ಸಚಿವ ಆಲಿ ಬಘೇರಿ ` ಹೌದಿ ಗುಂಪು ತನ್ನದೇ ಆದ ಸಾಧನಗಳನ್ನು ಹೊಂದಿದೆ ಮತ್ತು ತನ್ನ ಸ್ವಂತ ನಿರ್ಧಾರ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಅಮೆರಿಕ, ಇಸ್ರೇಲ್ನಂತಹ ಕೆಲವು ಶಕ್ತಿಗಳು ಪ್ರತಿರೋಧ ಗುಂಪುಗಳಿಂದ (ಹೌದಿಗಳು) ಹೊಡೆತಗಳನ್ನು ಅನುಭವಿಸುತ್ತಿರುವ ಕಾರಣಕ್ಕೆ ಈ ವಲಯದಲ್ಲಿ ಪ್ರತಿರೋಧ ಗುಂಪುಗಳ ಬಲವನ್ನು ಪ್ರಶ್ನಿಸುವುದು ಸರಿಯಲ್ಲ' ಎಂದಿದ್ದಾರೆ.