ಇಸ್ರೇಲ್ಗೆ ಸೇರಿದ ಹಡಗು ವಶಪಡಿಸಿಕೊಂಡ ಇರಾನ್
Photo credit: AP
ಇರಾನ್ ಶನಿವಾರ ಇಸ್ರೇಲ್ ಗೆ ಸಂಬಂಧಿಸಿದ ಕಂಟೇನರ್ ಹಡಗನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ʼಗಲ್ಫ್ನಲ್ಲಿರುವ ಜಿಯೋನಿಸ್ಟ್ ಆಡಳಿತಕ್ಕೆ (ಇಸ್ರೇಲ್) ಸಂಬಂಧಿಸಿದʼ ಕಂಟೇನರ್ ಹಡಗನ್ನು ಇರಾನ್ನ ರೆವೆಲ್ಯೂಷನ್ ಗಾರ್ಡ್ಗಳು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ.
ಈ ಪ್ರದೇಶದಲ್ಲಿ ಸಂಘರ್ಷವನ್ನು ಹೆಚ್ಚಿಸುವ ಪರಿಣಾಮಗಳನ್ನು ಇರಾನ್ ಅನುಭವಿಸಲಿದೆ ಎಂದು ಹಡಗನ್ನು ವಶಪಡಿಸಿಕೊಂಡಿರುವುದಾಗಿ ಇರಾನ್ ಘೋಷಿಸಿದ ನಂತರ ಇಸ್ರೇಲ್ ಸೇನೆ ಎಚ್ಚರಿಸಿದೆ.
'ಎಂಸಿಎಸ್ ಏರೀಸ್' ಹೆಸರಿನ ಕಂಟೈನರ್ ಹಡಗನ್ನು ಸೆಪಾ (ಗಾರ್ಡ್ಸ್) ನೌಕಾಪಡೆಯ ವಿಶೇಷ ಪಡೆಗಳು ಹೆಲಿಬೋರ್ನ್ ಕಾರ್ಯಾಚರಣೆಯನ್ನು ನಡೆಸುವ ಮೂಲಕ ವಶಪಡಿಸಿಕೊಂಡವು" ಎಂದು ಇರಾನ್ ನ ಅಧಿಕೃತ ಸುದ್ಧಿಸಂಸ್ಥೆಯಾದ IRNA ವರದಿ ಮಾಡಿದೆ.
ವಿಶ್ವ ವ್ಯಾಪಾರದಲ್ಲಿ ಪ್ರಮುಖವಾದ ಜಲಮಾರ್ಗವಾದ ಹೋರ್ಮುಜ್ ಜಲಸಂಧಿಯ ಬಳಿ ಕಾರ್ಯಾಚರಣೆ ನಡೆದಿದ್ದು, ಈ ಹಡಗನ್ನು ಸದ್ಯ ಇರಾನ್ನ ಪ್ರಾದೇಶಿಕ ನೀರಿನ ಕಡೆಗೆ ತಿರುಗಿಸಲಾಗಿದೆ ಎಂದು IRNA ಹೇಳಿದೆ.
ಸುಮಾರು ಎರಡು ವಾರಗಳ ಹಿಂದೆ ಸಿರಿಯಾದಲ್ಲಿನ ಡಮಾಸ್ಕಸ್ ರಾಯಭಾರ ಕಚೇರಿಯ ಕಾನ್ಸುಲರ್ ವಿಭಾಗದ ಮೇಲೆ ಮಾರಣಾಂತಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದ ನಂತರ, ಈ ಪ್ರದೇಶಕ್ಕೆ ಮಿಲಿಟರಿ ಬಲವರ್ಧನೆಗಳನ್ನು ಕಳುಹಿಸುತ್ತಿರುವುದಾಗಿ ಯುನೈಟೆಡ್ ಸ್ಟೇಟ್ಸ್ ಶುಕ್ರವಾರ ಹೇಳಿದೆ.