ಇಸ್ರೇಲ್ ಮೇಲೆ ಪ್ರತಿದಾಳಿಗೆ ಸಜ್ಜಾದ ಇರಾನ್; ಅಮೆರಿಕಕ್ಕೆ ಎಚ್ಚರಿಕೆ
Photo:NDTV
ಟೆಹರಾನ್: ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ಎನ್ನಲಾದ ದಾಳಿಗೆ ಪ್ರತೀಕಾರವಾಗಿ ಆ ದೇಶದ ಮೇಲೆ ಪ್ರತಿದಾಳಿಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಇರಾನ್ ಪ್ರಕಟಿಸಿದೆ. ಜತೆಗೆ ಪಕ್ಕಕ್ಕೆ ಸರಿಯುವಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಯಹೂದಿ ರಾಜ್ಯದ ಮೇಲೆ ಯುದ್ಧಕ್ಕೆ ಸಿದ್ಧ ಎಂದು ಹಿಜ್ಬುಲ್ಲಾ ಕೂಡ ಎಚ್ಚರಿಸಿದೆ.
ವಾಷಿಂಗ್ಟನ್ ಗೆ ಲಿಖಿತ ಸಂದೇಶ ನೀಡಿರುವ ಇರಾನ್ ಅಧ್ಯಕ್ಷರ ಉಪಮುಖ್ಯ ರಾಜಕೀಯ ವ್ಯವಹಾರಗಳ ಸಲಹೆಗಾರ ಮುಹಮ್ಮದ್ ಜಮ್ಶೀದಿ ಅವರು ಎಕ್ಸ್ ಪೋಸ್ಟ್ ನಲ್ಲಿ "ನೇತನ್ಯಾಹು ಅವರ ಬಲೆಗೆ ಬೀಳದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ" ಎಂದು ಹೇಳಿದ್ದಾರೆ. "ನಿಮಗೆ ದಾಳಿಯ ಹೊಡೆತ ಬೀಳಬಾರದು ಎಂದಾದರೆ ಪಕ್ಕಕ್ಕೆ ಸರಿಯಿರಿ" ಎಂದು ಅಮೆರಿಕಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡದಂತೆ ಅಮೆರಿಕ ಇರಾನ್ ಗೆ ಕೇಳಿಕೊಂಡಿದೆ ಎಂದು ಜಮ್ಶೀದಿ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕ ಕಟ್ಟೆಚ್ಚರದ ಸ್ಥಿತಿಯಲ್ಲಿದ್ದು, ಇಸ್ರೇಲ್ ಮೇಲೆ ಇರಾನ್ ನಡೆಸಬಹುದಾದ ಸಂಭಾವ್ಯ ದಾಳಿ ಬಗ್ಗೆ ಎಚ್ಚರಿಕೆಯಿಂದ ಇದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಸೇನೆ, ಗುಪ್ತಚರ ನೆಲೆಗಳು ಸೇರಿದಂತೆ ಇಸ್ರೇಲಿನ ಮೇಲೆ ಯಾವುದೇ ಬಗೆಯ ದಾಳಿ ನಡೆಯಬಹುದು ಎಂಬ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಎನ್ ಬಿ ಸಿ ವರದಿ ಮಾಡಿದೆ.