ಟ್ರಂಪ್ ಹತ್ಯೆಗೆ ಇರಾನ್ ನಲ್ಲಿ ಸಂಚು: ಅಮೆರಿಕ ಗುಪ್ತಚರ ಇಲಾಖೆ ವರದಿ
ಡೊನಾಲ್ಡ್ ಟ್ರಂಪ್ | PC : PTI
ವಾಶಿಂಗ್ಟನ್ : ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹತ್ಯೆಗೆ ಇರಾನ್ ನಲ್ಲಿ ಸಂಚು ರೂಪಿಸಿರುವ ಬಗ್ಗೆ ಅಮೆರಿಕಕ್ಕೆ ಗುಪ್ತಚರ ಮಾಹಿತಿ ಲಭಿಸಿದೆ. ಬೆದರಿಕೆ ಹೆಚ್ಚಿರುವುದನ್ನು ರಹಸ್ಯ ಭದ್ರತಾ ಸೇವೆ ಟ್ರಂಪ್ ಅವರ ಚುನಾವಣಾ ಪ್ರಚಾರ ತಂಡದೊಂದಿಗೆ ಹಂಚಿಕೊಂಡಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಈ ವರದಿ ಬಗ್ಗೆ ಪ್ರತಿಕ್ರಿಯಿಸಲು ಶ್ವೇತಭವನ ನಿರಾಕರಿಸಿದೆ. ಆದರೆ ಶನಿವಾರ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ ಶೂಟರ್ ವಿದೇಶಿ ಸಹಚರನನ್ನು ಹೊಂದಿದ್ದ ಬಗ್ಗೆ ಯಾವುದೇ ಸೂಚನೆಗಳಿಲ್ಲ ಎಂದಿದೆ. ಆರೋಪ ಆಧಾರರಹಿತ ಮತ್ತು ದುರುದ್ದೇಶ ಪೂರಿತ ಎಂದು ಇರಾನ್ ಹೇಳಿದೆ.
2020ರ ಜನವರಿಯಲ್ಲಿ ನಡೆದಿದ್ದ ಇರಾನ್ ನ ಮಿಲಿಟರಿ ಕಮಾಂಡರ್ ಖಾಸಿಂ ಸುಲೇಮಾನಿ ಹತ್ಯೆಗೆ ಆಗ ಅಧ್ಯಕ್ಷರಾಗಿದ್ದ ಟ್ರಂಪ್ ಆದೇಶಿಸಿದ್ದರು ಎಂದು ಆರೋಪಿಸಿದ್ದ ಇರಾನ್ ಟ್ರಂಪ್ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳಬಹುದು ಎಂದು ಅಮೆರಿಕ ಅಧಿಕಾರಿಗಳು ಕಳವಳಗೊಂಡಿದ್ದಾರೆ. `2020ರಿಂದಲೂ ಟ್ರಂಪ್ ವಿರುದ್ಧ ಇರಾನ್ನ ಬೆದರಿಕೆಯನ್ನು ನಾವು ಗಮನಿಸುತ್ತಿದ್ದೇವೆ. ಇದನ್ನು ಅತ್ಯಂತ ಆದ್ಯತೆಯ ರಾಷ್ಟ್ರೀಯ ಮತ್ತು ತಾಯ್ನಾಡಿನ ಭದ್ರತೆಯ ವಿಷಯವೆಂದು ಪರಿಗಣಿಸುತ್ತೇವೆ' ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರೆ ಆಡ್ರಿಯನ್ ವಾಟ್ಸನ್ ಹೇಳಿದ್ದಾರೆ.
ಇರಾನ್ ನಲ್ಲಿ ಸಂಚು ರೂಪಿಸಿರುವ ಕುರಿತ ಮಾಹಿತಿಯನ್ನು ಮಾನವ ಮೂಲದಿಂದ ರವಾನಿಸಲಾಗಿದೆ. ತಕ್ಷಣ ರಾಷ್ಟ್ರೀಯ ಭದ್ರತಾ ಸಮಿತಿ ರಹಸ್ಯ ಗುಪ್ತಚರ ಸೇವಾ ಏಜೆನ್ಸಿಯನ್ನು ಸಂಪರ್ಕಿಸಿ ಟ್ರಂಪ್ ಭದ್ರತೆಯನ್ನು ಹೆಚ್ಚಿಸಲು ಸೂಚಿಸಿದೆ. ಬೆದರಿಕೆ ಹೆಚ್ಚಿರುವುದು ಟ್ರಂಪ್ ಅವರ ಪ್ರಚಾರ ತಂಡಕ್ಕೂ ತಿಳಿದಿದೆ ಎಂದು ಸಿಎನ್ಎನ್ ವರದಿ ಹೇಳಿದೆ.
ಈ ಆರೋಪ ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿದೆ. ಇರಾನ್ನ ದೃಷ್ಟಿಕೋನದಲ್ಲಿ ಟ್ರಂಪ್ ಓರ್ವ ಕ್ರಿಮಿನಲ್ ಆಗಿದ್ದು ಜನರಲ್ ಸುಲೇಮಾನಿ ಹತ್ಯೆಗೆ ಆದೇಶಿಸಿದ್ದ ಅವರಿಗೆ ನ್ಯಾಯಾಲಯದ ಮೂಲಕ ಶಿಕ್ಷೆ ವಿಧಿಸಬೇಕು. ಟ್ರಂಪ್ ರನ್ನು ಶಿಕ್ಷಿಸಲು ಇರಾನ್ ಕಾನೂನು ಪ್ರಕ್ರಿಯೆಯ ಮಾರ್ಗವನ್ನು ಆರಿಸಿಕೊಂಡಿದೆ' ಎಂದು ವಿಶ್ವಸಂಸ್ಥೆಗೆ ಇರಾನ್ ನ ನಿಯೋಗ ಪ್ರತಿಕ್ರಿಯಿಸಿದೆ.