ಸಿರಿಯಾದಲ್ಲಿ ಇರಾನ್ ದೂತಾವಾಸದ ಮೇಲಿನ ದಾಳಿಗೆ ಪ್ರತೀಕಾರ : ಇರಾನ್ ಅಧ್ಯಕ್ಷರ ಪ್ರತಿಜ್ಞೆ
Photo:NDTV
ಟೆಹ್ರಾನ್: ಸಿರಿಯಾ ರಾಜಧಾನಿ ದಮಾಸ್ಕಸ್ನಲ್ಲಿರುವ ಇರಾನ್ ದೂತಾವಾಸದ ಮೇಲೆ ಇಸ್ರೇಲ್ ನಡೆಸಿದ ಶಂಕಿತ ವೈಮಾನಿಕ ದಾಳಿಗೆ ಇರಾನ್ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಮಂಗಳವಾರ ಹೇಳಿದ್ದಾರೆ.
ದಮಾಸ್ಕಸ್ನಲ್ಲಿ ಇರಾನ್ ದೂತಾವಾಸದ ಮೇಲೆ ಸೋಮವಾರ ನಡೆದ ವೈಮಾನಿಕ ದಾಳಿಯಲ್ಲಿ ಇರಾನಿಯನ್ ರೆವೊಲ್ಯುಷನರಿ ಗಾಡ್ರ್ಸ್ ಕಾಪ್ರ್ಸ್(ಐಆರ್ಜಿಸಿ)ಯ ಇಬ್ಬರು ಉನ್ನತ ಕಮಾಂಡರ್ ಸೇರಿದಂತೆ 7 ಇರಾನಿಯನ್ ಮಿಲಿಟರಿ ಕಮಾಂಡರ್ ಗಳು ಮೃತಪಟ್ಟಿದ್ದಾರೆ. ಪ್ರತಿರೋಧ ಪಡೆಯ ಇಚ್ಛಾಶಕ್ತಿಯನ್ನು ನಾಶಗೊಳಿಸಲು ವಿಫಲಗೊಂಡ ಬಳಿಕ ಇಸ್ರೇಲ್ ತನ್ನನ್ನು ಉಳಿಸಿಕೊಳ್ಳಲು ಕುರುಡು ಹತ್ಯೆಗಳನ್ನು ನಡೆಸುವ ಕಾರ್ಯಸೂಚಿಯನ್ನು ಹೊಂದಿದೆ. ತನ್ನ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ತಿಳಿದುಕೊಳ್ಳಬೇಕು ಮತ್ತು ಈ ಹೇಡಿತನದ ಅಪರಾಧ ಕೃತ್ಯಕ್ಕೆ ತಕ್ಕ ಉತ್ತರ ಅವರಿಗೆ ಸಿಗಲಿದೆ' ಎಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ರಯೀಸಿ ಹೇಳಿದ್ದಾರೆ. ಇರಾನ್ ದೂತಾವಾಸದ 5 ಅಂತಸ್ತಿನ ಕಟ್ಟಡವನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಇರಾನ್ನ ಸಾಗರೋತ್ತರ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುವ ಐಆರ್ಜಿಸಿಯ 7 ಅಧಿಕಾರಿಗಳು ಹತರಾಗಿದ್ದಾರೆ.
ಇವರಲ್ಲಿ ಖುಡ್ಸ್ ಪಡೆಯ ಹಿರಿಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮುಹಮ್ಮದ್ ರಝಾ ಝಾಹಿದಿ ಮತ್ತು ಅವರ ಸಹಾಯಕ ಬ್ರಿ|ಜ| ಮುಹಮ್ಮದ್ ಹದಿ ಹಜಿ-ರಹೀಮಿ ಸೇರಿದ್ದಾರೆ ಎಂದು ವರದಿಯಾಗಿದೆ. ದೀರ್ಘಾವಧಿಯಿಂದಲೂ ಇಸ್ರೇಲ್ ಸಿರಿಯಾದಲ್ಲಿನ ಇರಾನ್ನ ಮಿಲಿಟರಿ ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಆದರೆ ಸೋಮವಾರದ ದಾಳಿಯು ಮೊದಲ ಬಾರಿಗೆ ದೂತಾವಾಸದ ಆವರಣಕ್ಕೆ ನೇರವಾಗಿ ಅಪ್ಪಳಿಸಿದೆ.