ಅಸ್ಸಾದ್ ಪದಚ್ಯುತಿಗೆ ಅಮೆರಿಕ, ಇಸ್ರೇಲ್ ಪಿತೂರಿ :ಇರಾನ್ ಪರಮೋಚ್ಛ ನಾಯಕ ಖಾಮಿನೈ ಆರೋಪ
ಆಯತುಲ್ಲಾ ಆಲಿ ಖಾಮಿನೈ | PC : PTI
ಟೆಹ್ರಾನ್ : ಸಿರಿಯಾದ ಮಾಜಿ ಅಧ್ಯಕ್ಷ ಬಶಾರ್ ಅಲ್-ಅಸ್ಸಾದ್ ಅವರ ಪದಚ್ಯುತಿಗೆ ಮತ್ತು ಸಿರಿಯಾದಿಂದ ಇರಾನ್ ಅನ್ನು ಹೊರಹಾಕುವ ಷಡ್ಯಂತ್ರದಲ್ಲಿ ಅಮೆರಿಕ ಮತ್ತು ಇಸ್ರೇಲ್ `ಕಮಾಂಡ್ ಸೆಂಟರ್' ಆಗಿ ಕಾರ್ಯನಿರ್ವಹಿಸಿದೆ ಎಂದು ಇರಾನ್ ನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಪ್ರತಿಪಾದಿಸಿದ್ದಾರೆ.
ಇರಾನ್ ಗುಪ್ತಚರ ಏಜೆನ್ಸಿ ಸಂಭವನೀಯ ದಾಳಿಯ ಬಗ್ಗೆ ಅಸ್ಸಾದ್ ಸರಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿತ್ತು ಎಂದು ಹೇಳಿರುವ ಅವರು, ಸಿರಿಯಾದ ಯುವಕರು ಅಂತಿಮವಾಗಿ ದೇಶವನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇರಾನ್ ಬೆಂಬಲಿತ `ಪ್ರತಿರೋಧ ಕಕ್ಷೆ'ಯ ಪ್ರಧಾನ ಸ್ತಂಭವಾಗಿ ಪರಿಗಣಿಸಲ್ಪಟ್ಟಿದ್ದ ಸಿರಿಯಾದ ಅಸ್ಸಾದ್ ಆಡಳಿತ ಕುಸಿದು ಬಿದ್ದಿರುವುದು ಇರಾನ್ ಗೆ ಬಹುದೊಡ್ಡ ಹಿನ್ನಡೆಯೆಂದು ವ್ಯಾಖ್ಯಾನಿಸಲಾಗಿದೆ.
`ಸಿರಿಯಾದಲ್ಲಿ ನಡೆದಿರುವುದು ಅಮೆರಿಕ ಮತ್ತು ಯೆಹೂದಿಗಳ ಜಂಟಿ ಯೋಜನೆಯ ಕಾರ್ಯಗತ ರೂಪ ಎಂಬುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದ ಅವರು, ಸಿರಿಯಾದ ನೆರೆಯ ಸರಕಾರವು ಈ ವಿಷಯದಲ್ಲಿ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ ಎಂದು ಪರೋಕ್ಷವಾಗಿ ಟರ್ಕಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಅಸ್ಸಾದ್ ಸರಕಾರವನ್ನು ಕಿತ್ತೊಗೆಯಲು ಯಶಸ್ವಿಯಾದ ಬಂಡುಕೋರ ಪಡೆಯ ಮಿಂಚಿನ ಕಾರ್ಯಾಚರಣೆಗೆ ಟರ್ಕಿ ಪ್ರಮುಖ ಬೆಂಬಲ ಒದಗಿಸಿದೆ.
`ಆದರೆ ಸಿರಿಯಾದಲ್ಲಿ ಈಗಿರುವ ಪರಿಸ್ಥಿತಿ ಶಾಶ್ವತವಾಗಿ ಇರುವುದಿಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಲಿ. ದಮಾಸ್ಕಸ್ ನಲ್ಲಿ ಕೆಲವರು ನರ್ತಿಸುತ್ತಾ ಸಂಭ್ರಮಾಚರಿಸುತ್ತಿದ್ದಾರೆ. ಇತರರ ಪ್ರದೇಶವನ್ನು ಉಲ್ಲಂಘಿಸಿದ್ದಾರೆ. ಸಿರಿಯಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿ, ಟ್ಯಾಂಕ್ ಹಾಗೂ ಫಿರಂಗಿ ದಳದೊಂದಿಗೆ ಸಿರಿಯಾದೊಳಗೆ ಪ್ರವೇಶಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಸಿರಿಯಾದ ಯುವಜನತೆ ನಿಸ್ಸಂಶಯವಾಗಿ ದೃಢವಾಗಿ ನಿಲ್ಲುತ್ತಾರೆ. ಈ ಪರಿಸ್ಥಿತಿಯನ್ನು ಬದಲಾಯಿಸಲಿದ್ದಾರೆ' ಎಂದು ಖಾಮಿನೈ ಹೇಳಿದ್ದಾರೆ.
ಸಿರಿಯಾದಲ್ಲಿ ಇರಾನ್ ನ ಕಾರ್ಯತಂತ್ರದಲ್ಲಿ ಏನು ತಪ್ಪಾಗಿದೆ ಮತ್ತು ಇದರಿಂದ ಇರಾನ್ ನ ಭದ್ರತೆಗೆ ಆಗುವ ಪರಿಣಾಮದ ಬಗ್ಗೆ ವಿಶ್ಲೇಷಣೆ ನಡೆಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಸಿರಿಯಾದಲ್ಲಿನ ಬೆಳವಣಿಗೆಗಳ ಬಗ್ಗೆ ಮಂಗಳವಾರ ಅರಬ್ ರಾಷ್ಟ್ರಗಳ ಗುಂಪಿಗೆ ಮಾಹಿತಿ ನೀಡುವ ಸಭೆಗೆ ಇರಾನ್ ಪ್ರತಿನಿಧಿಯನ್ನು ಆಹ್ವಾನಿಸಿಲ್ಲ. ಇದು ಸಿರಿಯಾದಲ್ಲಿ ಹಯಾತ್ ತಹ್ರೀರ್ ಅಲ್-ಶಾಮ್(ಎಚ್ಟಿಎಸ್) ಪ್ರಾಬಲ್ಯದ ಸರಕಾರದಲ್ಲಿ ಇರಾನ್ ನ ಪ್ರಭಾವ ಕಡಿಮೆಯಾಗಿರುವುದನ್ನು ಸೂಚಿಸಿದೆ. ಈ ಮಧ್ಯೆ, ಅಸ್ಸಾದ್ ಸರಕಾರವನ್ನು ಮಾನ್ಯ ಮಾಡಲು ನಿರಾಕರಿಸಿದ್ದ ಖತರ್ ಶೀಘ್ರದಲ್ಲೇ ಸಿರಿಯಾದಲ್ಲಿ ತನ್ನ ರಾಯಭಾರಿ ಕಚೇರಿಯನ್ನು ಮರು ಆರಂಭಿಸುವುದಾಗಿ ಘೋಷಿಸಿದೆ. ಇದರ ಜತೆಗೆ, ಅಸ್ಸಾದ್ ಆಡಳಿತ ಪತನಗೊಂಡಿರುವುದನ್ನು ಇರಾನ್ ಬೆಂಬಲಿತ ಹಮಾಸ್ ಸ್ವಾಗತಿಸಿರುವುದರಿಂದ ಇರಾನ್ ಮುಜುಗುರಕ್ಕೆ ಸಿಲುಕಿದೆ.
ಸಿರಿಯಾಕ್ಕೆ ಇರಾನ್ ಸುಮಾರು 40 ಶತಕೋಟಿ ಡಾಲರ್ ಗಳಷ್ಟು ಸಾಲ ನೀಡಿದ್ದು ಜತೆಗೆ ಅಲ್ಲಿನ ಕಾರು ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಮಾಡಿದೆ. ಇದು ಇರಾನ್ ನ ಆರ್ಥಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
► ಜನಾಂಗೀಯ ಅಲ್ಪಸಂಖ್ಯಾತರ ಪಲಾಯನ
ಸಿರಿಯಾ-ಲೆಬನಾನ್ ನಡುವೆ ಕಾರ್ಯಾಚರಿಸುತ್ತಿರುವ ಏಕೈಕ ಗಡಿದಾಟು ಮಾಸ್ನಾ ಕ್ರಾಸಿಂಗ್ ಮೂಲಕ ಸಾವಿರಾರು ಜನಾಂಗೀಯ ಅಲ್ಪಸಂಖ್ಯಾತರು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಆದರೆ ಈ ಗಡಿದಾಟುವಿನ ಎರಡೂ ಬದಿಗಳಿಂದ ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿರುವುದರಿಂದ ಸಿರಿಯಾದ ಗಡಿಭಾಗದಲ್ಲೇ ಹಲವರು ಸಿಕ್ಕಿಬಿದ್ದಿದ್ದಾರೆ. ಸಿರಿಯಾದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವವರಲ್ಲಿ ಹೆಚ್ಚಿನವರು ಸಿರಿಯಾದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಎಂದು ವರದಿಯಾಗಿದೆ.