ಖತರ್ನಲ್ಲಿ ಇಸ್ಮಾಯಿಲ್ ಹನಿಯೆಹ್ ಅಂತ್ಯಕ್ರಿಯೆ
ಇಸ್ಮಾಯೀಲ್ ಹಾನಿಯೆಹ್ | PC : NDTV
ದೋಹಾ : ಟೆಹರಾನ್ನಲ್ಲಿ ಶಂಕಿತ ಇಸ್ರೇಲ್ ದಾಳಿಯಿಂದ ಹತ್ಯೆಯಾದ ಹಮಾಸ್ ನಾಯಕ ಇಸ್ಮಾಯೀಲ್ ಹನಿಯೆಹ್ ಅವರ ಪಾರ್ಥಿವಶರೀರದ ಅಂತ್ಯಕ್ರಿಯೆ ಶುಕ್ರವಾರ ಖತರ್ ರಾಜಧಾನಿ ದೋಹಾದಲ್ಲಿರುವ ಮಸೀದಿಯೊಂದರಲ್ಲಿ ನೆರವೇರಿತು.
ದೋಹಾದ ಲುಸೈಲ್ ಪ್ರದೇಶದಲ್ಲಿರುವ ಇಮಾಂ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ ಮಸೀದಿಯ ಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿದ ಬಳಿಕ ಹನಿಯೆಹ್ಅವರ ಪಾರ್ಥಿವ ಶರೀರವನ್ನು ದಫನ ಮಾಡಲಾಯಿತು.
ಅತ್ಯಂತ ಬಿಗಿಭದ್ರತೆಯ ನಡುವೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಹುತೇಕ ಮಂದಿ ಫೆಲೆಸ್ತೀನ್ ಧ್ವಜಗಳನ್ನು ಹಿಡಿದಿದ್ದರೆ, ಕೆಲವರು ಫೆಲೆಸ್ತೀನ್ನ ಜನಪ್ರಿಯ ಚಾದರ ಕೆಫಿಯಾವನ್ನು ಧರಿಸಿದ್ದರು.
ಇರಾನ್ ರಾಜಧಾನಿ ಟೆಹರಾನ್ನ ವಸತಿಕಟ್ಟಡವೊಂದರಲ್ಲಿ ಬುಧವಾರ ನಸುಕಿನ ವೇಳೆ ನಡೆದ ದಾಳಿಯಲ್ಲಿ ಹನಿಯೆಹ್ ಹಾಗೂ ಅವರ ಅಂಗರಕ್ಷಕ ಸಾವನ್ನಪ್ಪಿದ್ದರು. ಇರಾನ್ನ ನೂತನ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಟೆಹರಾನ್ಗೆ ಆಗಮಿಸಿದ್ದಾಗ ಈ ದಾಳಿ ನಡೆದಿತ್ತು.
ಹಾನಿಯೆಹ್ ಅವರ ಗೌರವಾರ್ಥ ಟರ್ಕಿ ಹಾಗೂ ಪಾಕಿಸ್ತಾನ ಶುಕ್ರವಾರ ಒಂದು ದಿದ ಶೋಕಾಚರಣೆಯನ್ನು ಘೋಷಿಸಿದ್ದರೆ, ಹಮಾಸ್ ‘ ಉಗ್ರ ಕ್ರೋಧ’ದ ದಿನವಾಗಿ ಆಚರಿಸುವಂತೆ ಕರೆ ನೀಡಿದೆ.
ಟೆಹರಾನ್ನಲ್ಲಿ ಗುರುವಾರ ನಡೆದ ಹನಿಯೆಹ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ಸಂದರ್ಭ ನಡೆದ ಪ್ರಾರ್ಥನಾ ಸಭೆಯ ನೇತೃತ್ವವನ್ನು ಇರಾನ್ನ ಸರ್ವೋಚ್ಛ ನಾಯಕ ಮೊಹಮ್ಮದ್ ಅಲಿ ಖಾಮಿನೈ ವಹಿಸಿದ್ದರು. ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ , ಇರಾನ್ನ ಸೇನಾವರಿಷ್ಠರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.