ವಿಶ್ವಸಂಸ್ಥೆಯ ನೆರವು ಏಜೆನ್ಸಿಯನ್ನು ನಿಷೇಧಿಸುವ 2 ಮಸೂದೆಗಳಿಗೆ ಇಸ್ರೇಲ್ ಅಂಗೀಕಾರ
PC : UNRWA, @UNRWA/X
ಜೆರುಸಲೇಂ : ಸಂಘರ್ಷ ಪೀಡಿತ ಗಾಝಾದ ಜನತೆಗೆ ನೆರವಾಗುತ್ತಿರುವ ವಿಶ್ವಸಂಸ್ಥೆಯ ಪ್ರಮುಖ ಏಜೆನ್ಸಿಯ ಕಾರ್ಯಗಳಿಗೆ ಅಡ್ಡಿಯಾಗಬಹುದಾದ ಎರಡು ಮಸೂದೆಗಳನ್ನು ಇಸ್ರೇಲಿ ಸಂಸದರು ಸೋಮವಾರ ಅಂಗೀಕರಿಸಿದ್ದಾರೆ.
ಈ ಮಸೂದೆಗಳ ಅಂಗೀಕಾರದಿಂದಾಗಿ ವಿಶ್ವಸಂಸ್ತೆಯ ನೆರವು ಏಜೆನ್ಸಿಗೆ ಇಸ್ರೇಲಿ ನೆಲದಲ್ಲಿ ಕಾರ್ಯನಿರ್ವಹಿಸುವುದಕ್ಕೆ ನಿಷೇಧವನ್ನು ವಿಧಿಸಲಾಗಿದೆ. ಗಾಝಾ ಯುದ್ಧದಿಂದಾಗಿ ಮಾನವೀಯ ಬಿಕ್ಕಟ್ಟು ಶೋಚನೀಯ ಸ್ಥಿತಿಗೆ ತಲುಪಿರುವಂತೆ, ಇಸ್ರೇಲ್ ನ ಈ ನೂತನ ಮಸೂದೆಳು, ಫೆಲೆಸ್ತೀನಿಯರ ಮೇಲೆ ಉಂಟು ಮಾಡಬಹುದಾದ ಹಾನಿಕಾರಕ ಪರಿಣಾಮಳ ಬಗ್ಗೆ ಇಸ್ರೇಲ್ ನ ಮಿತ್ರರಾಷ್ಟ್ರಗಳು ಕೂಡಾ ಕಳವಳವನ್ನು ವ್ಯಕ್ತಪಡಿಸುತ್ತಿವೆ.
ಇಸ್ರೇಲ್ ಸಂಸತ್ ಅಂಗೀಕರಿಸಿದ ಮೊದಲನೆ ಕಾಯ್ದೆಯಡಿ, ಫೆಲೆಸ್ತೀನಿ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿ (ಯು ಎನ್ ಆರ್ ಡಬ್ಲ್ಯು ಎ)ಯು ಯಾವುದೇ ಚಟುವಟಕೆಯನ್ನು ನಡೆಸುವುದನ್ನು ಅಥವಾ ಇಸ್ರೇಲ್ ನೊಳಗೆ ಯಾವುದೇ ಸೇವೆಯನ್ನು ಒದಗಿಸುವುದನ್ನು ನಿಷೇಧಿಸಲಾಗಿದೆ. ಎರಡನೆ ಕಾಯ್ದೆಯು ಯು ಎನ್ ಆರ್ ಡಬ್ಲ್ಯು ಎ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಗಾಝಾದಲ್ಲಿ ಯು ಎನ್ ಆರ್ ಡಬ್ಲ್ಯುಎ ನಡೆಸುತ್ತಿರುವ ಶಾಲೆಗಳು ಮತ್ತಿತರ ಸಂಸ್ಥೆಗಳ ಮೇಲೆ ಇಸ್ರೇಲ್ ಸೇನೆ ಪದೇ ಪದೇ ದಾಳಿ ನಡೆಸುತ್ತಾ ಬಂದಿದೆ. ಕಳೆದ ವರ್ಷ ಹಮಾಸ್ ನಡೆಸಿದ ದಾಳಿಗಳಲ್ಲಿ ಯು ಎನ್ ಆರ್ ಡಬ್ಲ್ಯುಎ ಯ ನೂರಾರು ಸಿಬ್ಬಂದಿ ಪಾಲ್ಗೊಂಡಿದ್ದರೆಂದು ಇಸ್ರೇಲ್ ಆಪಾದಿಸಿದೆ. ಏಜನ್ಸಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡಗಳಲ್ಲಿ ಹಮಾಸ್ನ ಮಿಲಿಟರಿ ಸೊತ್ತುಗಳನ್ನು ತಾನು ಪತ್ತೆಹಚ್ಚಿರುವುದಾಗಿಯೂ ಅದು ಹೇಳಿದೆ.