ಇಸ್ರೇಲ್ ಗೆ 300 ಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮಾರಾಟ ; ಅಮೆರಿಕ ಅನುಮೋದನೆ

PC : NDTV
ವಾಷಿಂಗ್ಟನ್: ಇಸ್ರೇಲ್ ಗೆ ಸುಮಾರು 300 ಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮಾರಾಟಕ್ಕೆ ಟ್ರಂಪ್ ಆಡಳಿತ ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ.
ಗಾಝಾದಲ್ಲಿ ಹಮಾಸ್ ವಿರುದ್ಧದ ಯುದ್ದದಲ್ಲಿ ಇಸ್ರೇಲ್ ಬಳಸಿದ 2000 ಪೌಂಡ್ ತೂಕದ ಬೃಹತ್ ಬಾಂಬ್'ಗಳೂ ಈ ಪ್ಯಾಕೇಜ್ನಲ್ಲಿ ಸೇರಿದೆ. ಇವುಗಳನ್ನು ಪೂರೈಸುವುದಕ್ಕೆ ಅಗತ್ಯವಾದ ಅಮೆರಿಕ ಸಂಸತ್ನ ಪರಾಮರ್ಶೆ ಪ್ರಕ್ರಿಯೆಯನ್ನು ಟ್ರಂಪ್ ಆಡಳಿತ ಅನುಸರಿಸಿಲ್ಲ. ವಿದೇಶಾಂಗ ಇಲಾಖೆ ಶುಕ್ರವಾರ ತಡರಾತ್ರಿ ಅಮೆರಿಕ ಸಂಸತ್ಗೆ ಕಳುಹಿಸಿರುವ ಸರಣಿ ಅಧಿಸೂಚನೆಯಲ್ಲಿ ಇಸ್ರೇಲ್ ಗೆ 2.04 ಶತಕೋಟಿ ಡಾಲರ್ ಮೌಲ್ಯದ 35,500ಕ್ಕೂ ಅಧಿಕ ಎಂಕೆ 84 ಮತ್ತು ಬಿಎಲ್ಯು 117 ಬಾಂಬ್ಗಳು, 4000 ಪ್ರಿಡೇಟರ್ ಸಿಡಿತಲೆಗಳ ಮಾರಾಟಕ್ಕೆ ಸಹಿ ಹಾಕಲಾಗಿದೆ.
ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ರಕ್ಷಣಾ ಸಾಮಾಗ್ರಿಗಳನ್ನು ಇಸ್ರೇಲ್ ಸರಕಾರಕ್ಕೆ ತಕ್ಷಣ ಮಾರಾಟ ಮಾಡುವ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ವಿವರವಾದ ಸಮರ್ಥನೆ ಒದಗಿಸಿದ್ದಾರೆ. 2028ರಲ್ಲಿ ಇಸ್ರೇಲ್ ಗೆ 675.7 ದಶಲಕ್ಷ ಡಾಲರ್ ಮೌಲ್ಯದ ಮತ್ತೊಂದು ಕಂತಿನ ಶಸ್ತ್ರಾಸ್ತ್ರ ಪೂರೈಸಲೂ, 295 ದಶಲಕ್ಷ ಡಾಲರ್ ಮೊತ್ತದ ಬುಲ್ಡೋಜರ್ ಗಳ ಮಾರಾಟಕ್ಕೂ ರೂಬಿಯೊ ಅನುಮೋದನೆ ನೀಡಿದ್ದಾರೆ ' ಎಂದು ತಿಳಿಸಿದೆ.