ಟೆಲ್ ಅವೀವ್ ದಾಳಿ ಬಳಿಕ ಹೌತಿ ಬಂಡುಕೋರರ ನೆಲೆಗಳ ಮೇಲೆ ಇಸ್ರೇಲ್ ವಾಯುದಾಳಿ
PC: x.com/Danale
ಟೆಲ್ ಅವೀವ್: ಇಸ್ರೇಲ್ ರಾಜಧಾನಿ ಟೆಲ್ಅವೀವ್ ಮೇಲೆ ಶುಕ್ರವಾರ ಹೌದಿಗಳು ನಡೆಸಿದ ಡ್ರೋನ್ ದಾಳಿಗೆ ಪ್ರತೀಕಾರ ಕ್ರಮವಾಗಿ ಯೆಮನ್ನಲ್ಲಿ ಹೌದಿ ಬಂಡುಗೋರರ ನಿಯಂತ್ರಣದಲ್ಲಿರುವ ಹೊದೈದಾ ಬಂದರಿನ ಮೇಲೆ ಇಸ್ರೇಲ್ ಯುದ್ಧವಿಮಾನಗಳು ರವಿವಾರ ನಡೆಸಿದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು 87ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಹೊದೈದ ಬಂದರಿನಲ್ಲಿ ಬೆಂಕಿ ಹಾಗೂ ದಟ್ಟವಾದ ಹೊಗೆ ಆವರಿಸಿರುವುದಾಗಿ ಎಎಫ್ಪಿ ವರದಿ ಮಾಡಿದೆ.
ಟೆಲ್ ಅವೀವ್ನಿಂದ ಸುಮಾರು 2000 ಕಿ.ಮೀ ದೂರದಲ್ಲಿರುವ ಪ್ರಮುಖ ಬಂದರಿನ ಮೇಲೆ ವೈಮಾನಿಕ ದಾಳಿ ನಡೆಸಿರುವುದನ್ನು ಇಸ್ರೇಲ್ ದೃಢಪಡಿಸಿದ್ದು `ಇಸ್ರೇಲ್ ಪ್ರಜೆಗಳ ರಕ್ತಕ್ಕೆ ಬೆಲೆಯಿದೆ' ಎಂದಿದೆ. ಹೌದಿಗಳು ಮತ್ತೆ ಇಸ್ರೇಲ್ ಮೇಲೆ ದಾಳಿ ನಡೆಸುವ ಧೈರ್ಯ ಮಾಡಿದರೆ ಇನ್ನಷ್ಟು ವೈಮಾನಿಕ ಕಾರ್ಯಾಚರಣೆ ನಡೆಯಲಿದೆ' ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಎಚ್ಚರಿಕೆ ನೀಡಿದ್ದಾರೆ.
ಹೊದೈದಾದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಮಧ್ಯಪ್ರಾಚ್ಯದಾದ್ಯಂತ ಕಾಣಬಹುದಾಗಿದೆ ಮತ್ತು ಇದರ ಮಹತ್ವವು ಸ್ಪಷ್ಟವಾಗಿದೆ. ಗಾಝಾ ಯುದ್ಧದ ಸಂದರ್ಭ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವುದಾಗಿ ಪ್ರತಿಪಾದಿಸುವ ಇರಾನ್ ಬೆಂಬಲಿತ ಇತರ ಗುಂಪುಗಳಿಗೆ ಇದು ಎಚ್ಚರಿಕೆಯ ಸಂದೇಶವಾಗಿದೆ ಎಂದವರು ಹೇಳಿದ್ದಾರೆ. ನಮಗೆ ಹಾನಿ ಮಾಡುವ ಯಾರಾದರೂ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಟೆಲ್ ಅವೀವ್ಗೆ ಅಪ್ಪಳಿಸಿದ ಡ್ರೋನ್ನಂತಹ ಇರಾನ್ನ ಶಸ್ತ್ರಾಸ್ತ್ರಗಳ ವರ್ಗಾವಣೆಗೆ ಹೊದೈದಾ ಬಂದರನ್ನು ಹೌದಿಗಳು ಬಳಸುತ್ತಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗಾರಿ ಆರೋಪಿಸಿದ್ದಾರೆ. ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ತೈಲ ಸಂಗ್ರಹಾಗಾರ ಮತ್ತು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆದಿದ್ದು ಗಾಯಗೊಂಡವರಲ್ಲಿ ಹೆಚ್ಚಿನವರು ತೀವ್ರತರ ಸುಟ್ಟಗಾಯಕ್ಕೆ ಒಳಗಾಗಿರುವುದಾಗಿ ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ.
ಇದು ಯೆಮನ್ ವಿರುದ್ಧದ ಕ್ರೂರ ಆಕ್ರಮಣವಾಗಿದ್ದು ಗಾಝಾ ಯುದ್ಧದಲ್ಲಿ ಪೆಲೆಸ್ತೀನೀಯರನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಒತ್ತಡ ಹೇರಲು ಹೊದೈದಾ ಬಂದರಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಹೌದಿ ಮುಖಂಡರು ಹೇಳಿದ್ದಾರೆ. ಹೊದೈದಾ ಬಂದರಿನಲ್ಲಿ ದಟ್ಟವಾದ ಹೊಗೆ ಕವಿದಿದ್ದು ಹಲವು ಭಾರೀ ಸ್ಫೋಟ ಸಂಭವಿಸಿದೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುತ್ತಿರುವ ವೀಡಿಯೊವನ್ನು ಅಲ್-ಮಸಿರಃ ಟಿವಿ ವಾಹಿನಿ ಪ್ರಸಾರ ಮಾಡಿದೆ. ಗಾಯಗೊಂಡವರಲ್ಲಿ ಹೆಚ್ಚಿನವರು ಬಂದರು ನೌಕರರು. ನಗರ ಕತ್ತಲಲ್ಲಿ ಮುಳುಗಿದ್ದು ಪೆಟ್ರೋಲ್ ಸ್ಟೇಷನ್ಗಳನ್ನು ಮುಚ್ಚಲಾಗಿದೆ ಎಂದು ವರದಿ ಹೇಳಿದೆ. ಸಾಕಷ್ಟು ಪ್ರಮಾಣದಲ್ಲಿ ತೈಲ ದಾಸ್ತಾನಿದೆ ಎಂದು ಇಂಧನ ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ಹೌದಿ ಸ್ವಾಮ್ಯದ ಸಬಾ ಸುದ್ದಿಸಂಸ್ಥೆ ವರದಿ ಮಾಡಿದೆ. ವಾಯುದಾಳಿಯ ಸಂದರ್ಭ ಬಂದರಿನಲ್ಲಿ 4, ಲಂಗರು ಹಾಕುವ ಪ್ರದೇಶದಲ್ಲಿ 8 ವಾಣಿಜ್ಯ ನೌಕೆಗಳಿದ್ದವು. ಹಡಗುಗಳಿಗೆ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಕಡಲ ಭದ್ರತಾ ಸಂಸ್ಥೆ `ಆಂಬ್ರೆ' ಹೇಳಿದೆ.
`ಹೊದೈದಾ ದಾಳಿಯಲ್ಲಿ ನಾವು ಯಾವುದೇ ರೀತಿಯಲ್ಲಿ ಒಳಗೊಂಡಿಲ್ಲ. ನಮ್ಮ ವಾಯುಕ್ಷೇತ್ರಕ್ಕೆ ನುಸುಳಲು ಯಾರಿಗೂ ಅವಕಾಶ ನೀಡಿವುದಿಲ್ಲ' ಎಂದು ಸೌದಿ ಅರೆಬಿಯಾ ಸ್ಪಷ್ಟಪಡಿಸಿದೆ.
► ಇಸ್ರೇಲ್ ಭಾರೀ ಬೆಲೆ ತೆರಬೇಕು : ಹೌದಿಗಳ ಎಚ್ಚರಿಕೆ
ಹೊದೈದಾ ದಾಳಿಗೆ ಸೇಡು ತೀರಿಸಿಕೊಳ್ಳುವುದಾಗಿ ಹೌದಿ ಪಾಲಿಟ್ಬ್ಯೂರೊ ಸದಸ್ಯ ಮುಹಮ್ಮದ್ ಅಲ್-ಬುಖೈತಿ ಎಚ್ಚರಿಕೆ ನೀಡಿದ್ದಾರೆ. ನಾಗರಿಕ ಸೌಲಭ್ಯಗಳನ್ನು ಗುರಿಯಾಗಿಸಿದ ದಾಳಿಗೆ ಇಸ್ರೇಲ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಇಸ್ರೇಲ್ ಸೇನೆಯ ಮೂರ್ಖ ನಡೆಯು ಹೊಸ ಅಪಾಯಕಾರಿ ಹಂತವನ್ನು ಸೂಚಿಸುತ್ತದೆ ಮತ್ತು ಗಾಝಾ ಯುದ್ಧಕ್ಕೆ ಅಪಾಯಕಾರಿ ತಿರುವನ್ನು ಗುರುತಿಸಿದೆ ಎಂದು ಹೌದಿಗಳ ಮಿತ್ರ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ಎಚ್ಚರಿಕೆ ನೀಡಿದೆ.
► ಸಂಯಮ ವಹಿಸಲು ವಿಶ್ವಸಂಸ್ಥೆ ಕರೆ
ಯೆಮನ್ನ ಬಂದರು ನಗರ ಹೊದೈದಾದ ಮೇಲೆ ಇಸ್ರೇಲ್ನ ವೈಮಾನಿಕ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಗರಿಷ್ಟ ಸಂಯಮ ವಹಿಸುವಂತೆ ಕರೆ ನೀಡಿದ್ದಾರೆ.
ನಾಗರಿಕರಿಗೆ ಮತ್ತು ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯುಂಟು ಮಾಡುವ ದಾಳಿಗಳನ್ನು ತಪ್ಪಿಸಬೇಕು. ಪ್ರದೇಶದಲ್ಲಿ ಉದ್ವಿಗ್ನತೆಯ ಉಲ್ಬಣಿಸುವ ಅಪಾಯದ ಬಗ್ಗೆ ತೀವ್ರ ಕಳವಳ ಹೊಂದಿರುವುದಾಗಿ ಗುಟೆರಸ್ ಹೇಳಿದ್ದಾರೆ.