ಸಿರಿಯಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಕನಿಷ್ಟ 42 ಮಂದಿ ಸಾವು
Photo: NDTV
ದಮಾಸ್ಕಸ್: ಸಿರಿಯಾದ ಅಲೆಪ್ಪೋ ಪ್ರಾಂತದ ಮೇಲೆ ಶುಕ್ರವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 36 ಸಿರಿಯಾ ಯೋಧರ ಸಹಿತ 42 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಸಿರಿಯಾದಲ್ಲಿ 2011ರಲ್ಲಿ ಅಂತರ್ಯುದ್ಧ ಉಲ್ಬಣಗೊಂಡ ಬಳಿಕ ಅಲ್ಲಿನ ಸೇನಾನೆಲೆಯನ್ನು ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ಪಡೆಗಳನ್ನು ಗುರಿಯಾಗಿಸಿ ಇಸ್ರೇಲ್ ನಿರಂತರ ವಾಯುದಾಳಿಯನ್ನು ಮುಂದುವರಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯ ಬಳಿಕ ಸಿರಿಯಾದ ಮೇಲೆ ಇಸ್ರೇಲ್ನ ವೈಮಾನಿಕ ದಾಳಿ ಹೆಚ್ಚಿದ್ದು ಶುಕ್ರವಾರದ ದಾಳಿ 24 ಗಂಟೆಯಲ್ಲಿ 2ನೇ ಪ್ರಮುಖ ದಾಳಿಯಾಗಿದೆ.
ಅಲೆಪ್ಪೋ ವಿಮಾನ ನಿಲ್ದಾಣದ ಬಳಿಯಿರುವ ಹಿಜ್ಬುಲ್ಲಾ ಪಡೆಯ ರಾಕೆಟ್ ಡಿಪೋವನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ 6 ಸದಸ್ಯರು ಮತ್ತು ಸಿರಿಯಾ ಸೇನೆಯ 36 ಯೋಧರು ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ಮೂಲದ `ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್' ಹೇಳಿದೆ. ಇಸ್ರೇಲ್ ವಾಯುದಾಳಿಯಲ್ಲಿ ಅಲೆಪ್ಪೋದ ಜನವಸತಿ ಕಟ್ಟಡ ಧ್ವಂಸವಾಗಿದ್ದು ಇಬ್ಬರು ನಾಗರಿಕರು ಹಾಗೂ ಹಲವು ಯೋಧರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಸೇನೆಯ ಮೂಲಗಳನ್ನು ಉಲ್ಲೇಖಿಸಿ ಸಿರಿಯಾದ ಸರಕಾರಿ ಸ್ವಾಮ್ಯದ ಸನಾ ಸುದ್ಧಿಸಂಸ್ಥೆ ವರದಿ ಮಾಡಿದೆ.