ಗಾಝಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ
ಸಾಂದರ್ಭಿಕ ಚಿತ್ರ | aljazeera.com
ಗಾಝಾ: ಉತ್ತರ ಗಾಝಾದ ಬೀಟ್ ಲಾಹಿಯಾ ಪಟ್ಟಣದಲ್ಲಿನ ಕಮಲ್ ಅದ್ವಾನ್ ಆಸ್ಪತ್ರೆಯ ಮೇಲೆ ಇಸ್ರೇಲಿ ಪಡೆಗಳು ಶೆಲ್ ದಾಳಿ ನಡೆಸಿದ್ದು ವಿದ್ಯುತ್ ಮತ್ತು ಆಮ್ಲಜನಕ ಪಂಪ್ಗಳನ್ನು ಹಾನಿಗೊಳಿಸಿದೆ ಮತ್ತು ತುರ್ತು ಶಸ್ತ್ರಚಿಕಿತ್ಸೆಗೆ ಅಡ್ಡಿಪಡಿಸಿದೆ ಎಂದು ಫೆಲೆಸ್ತೀನ್ ಆರೋಗ್ಯಾಧಿಕಾರಿಗಳು ರವಿವಾರ ಹೇಳಿದ್ದಾರೆ.
ಉತ್ತರ ಗಾಝಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇವಲ ಮೂರು ಆಸ್ಪತ್ರೆಗಳಲ್ಲಿ ಒಂದಾಗಿರುವ ಕಮಲ್ ಅದ್ವಾನ್ ಆಸ್ಪತ್ರೆಯ ಮೇಲೆ ಇಸ್ರೇಲ್ ಸುಮಾರು 100 ಟ್ಯಾಂಕ್ ಶೆಲ್ಗಳು ಹಾಗೂ ಬಾಂಬ್ಗಳಿಂದ ದಾಳಿ ನಡೆಸಿದ್ದು ಹಲವಾರು ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳು ಗಾಯಗೊಂಡಿರುವುದಾಗಿ ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಈಗ ತೀವ್ರ ನಿಗಾ ಘಟಕದಲ್ಲಿ 6 ಸೇರಿದಂತೆ 112 ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಹಲವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಆದರೆ ವಿದ್ಯುತ್ ಮತ್ತು ಆಮ್ಲಜನಕ ಪೂರೈಕೆ ಮರುಸ್ಥಾಪನೆ ಆದರೆ ಮಾತ್ರ ಶಸ್ತ್ರಚಿಕಿತ್ಸಾ ಕೊಠಡಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂದವರು ಹೇಳಿದ್ದಾರೆ.