ಗಾಝಾ ಅಂಚೆ ಕಚೇರಿ ಮೇಲೆ ಇಸ್ರೇಲ್ ದಾಳಿ | 30 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ | PC : PTI
ಗಾಝಾ : ಗಾಝಾದಲ್ಲಿ ಸ್ಥಳಾಂತರಗೊಂಡ ಫೆಲೆಸ್ತೀನೀಯರು ಆಶ್ರಯ ಪಡೆದಿದ್ದ ಅಂಚೆ ಕಚೇರಿಯನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು 50 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ.
ಇಸ್ರೇಲಿ ಪ್ರಜೆಗಳು ಹಾಗೂ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದ ಹಮಾಸ್ನ ಹಿರಿಯ ಸದಸ್ಯನನ್ನು ಗುರಿಯಾಗಿಸಿ ದಾಳಿ ನಡೆದಿರುವುದಾಗಿ ಇಸ್ರೇಲ್ ಹೇಳಿದೆ. ನುಸಿರಾತ್ ನಿರಾಶ್ರಿತರ ಶಿಬಿರದಲ್ಲಿರುವ ಅಂಚೆ ಕಚೇರಿಯಲ್ಲಿ ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದರು. ಇದರ ಮೇಲೆ ಗುರುವಾರ ತಡರಾತ್ರಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಗಾಝಾ ಅಧಿಕಾರಿಗಳು ಹೇಳಿದ್ದಾರೆ. ಗುರುವಾರ ದಕ್ಷಿಣ ಗಾಝಾದಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಮಾನವೀಯ ನೆರವು ಪೂರೈಸುವ ಟ್ರಕ್ಗಳಿಗೆ ಭದ್ರತೆ ಒದಗಿಸುತ್ತಿದ್ದ ತಂಡದ 13 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಮೂಲಗಳು ಹೇಳಿದ್ದರೆ, ಮಾನವೀಯ ನೆರವು ಒದಗಿಸುತ್ತಿದ್ದ ಟ್ರಕ್ ಅನ್ನು ಅಪಹರಿಸಲು ಪ್ರಯತ್ನಿಸಿದ ಉಗ್ರರ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಪ್ರತಿಪಾದಿಸಿದೆ. ಈ ಮಧ್ಯೆ, ಗಾಝಾ ಪಟ್ಟಣದ ಹಲವು ಜಿಲ್ಲೆಗಳ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೇನೆ ಹೊಸದಾಗಿ ಆದೇಶ ಹೊರಡಿಸಿರುವುದಾಗಿ ವರದಿಯಾಗಿದೆ.