ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ವರದಿ
Photo: PTI
ಜೆರುಸಲೇಂ: ಗಾಝಾದ ಮಗಾಝಿ ನಿರಾಶ್ರಿತರ ಶಿಬಿರವನ್ನು ಗುರಿಯಾಗಿಸಿ ರವಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಫೆಲೆಸ್ತೀನ್ ರೈತ ಮೃತಪಟ್ಟಿದ್ದು ಮತ್ತೊಬ್ಬ ಗಾಯಗೊಂಡಿರುವುದಾಗಿ ರೆಡ್ಕ್ರೆಸೆಂಟ್ ವರದಿ ಮಾಡಿದೆ.
ಈ ಮಧ್ಯೆ, ಗಾಝಾದ ಮೇಲಿನ ಇಸ್ರೇಲ್ ದಾಳಿಯಲ್ಲಿ ತನ್ನ ಒಬ್ಬ ಉನ್ನತ ಕಮಾಂಡರ್ ಹಾಗೂ ಇತರ ಮೂವರು ಹಿರಿಯ ಮುಖಂಡರು ಮೃತಪಟ್ಟಿದ್ದಾರೆ ಎಂದು ಹಮಾಸ್ ಮಾಹಿತಿ ನೀಡಿದೆ. ಕದನ ವಿರಾಮದ ಷರತ್ತನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಆರೋಪಿಸಿದ್ದ ಹಮಾಸ್ ಶನಿವಾರ 17 ಒತ್ತೆಯಾಳುಗಳ ಬಿಡುಗಡೆಯನ್ನು 1 ಗಂಟೆ ವಿಳಂಬಿಸಿತ್ತು.
ಇದಕ್ಕೆ ಪ್ರತಿಯಾಗಿ ಇಸ್ರೇಲ್ 39 ಫೆಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆಗೊಳಿಸಿದೆ. ರವಿವಾರ ಬಿಡುಗಡೆಗೊಳ್ಳಲಿರುವ ಒತ್ತೆಯಾಳುಗಳ ಪಟ್ಟಿ ದೊರಕಿದ್ದು ಇದನ್ನು ಭದ್ರತಾ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ರವಿವಾರದ ವಿನಿಮಯ ಪ್ರಕ್ರಿಯೆ ನಿಗದಿತ ರೀತಿಯಲ್ಲಿಯೇ ನಡೆಯುವ ನಿರೀಕ್ಷೆಯಿದೆ ಎಂದು ಯುದ್ಧವಿರಾಮ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿರುವ ಖತರ್ ಹೇಳಿದೆ.