ಗಾಝಾದ 3 ಶಾಲಾಕಟ್ಟಡಗಳಲ್ಲಿ ಸಂತ್ರಸ್ತ ಶಿಬಿರಗಳಿಗೆ ಇಸ್ರೇಲ್ ದಾಳಿ
24 ತಾಸುಗಳಲ್ಲಿ 112 ಫೆಲೆಸ್ತೀನಿಯರ ಬಲಿ

PC : aljazeera.com
ಜೆರುಸಲೇಂ: ಕಳೆದ 24 ತಾಸುಗಳಲ್ಲಿ ಗಾಝಾದ ವಿವಿಧೆಡೆ ಮನೆಗಳು ಹಾಗೂ ಸಂತ್ರಸ್ತರ ಶಿಬಿರಗಳ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಗಳಲ್ಲಿ 112 ಮಂದಿ ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ.
ಗಾಝಾ ನಗರದ ತುಫಾ ಎಂಬಲ್ಲಿ 3 ಶಾಲಾಕಟ್ಟಡಗಳ ಮೇಲೆ ಇಸ್ರೇಲ್ ಸೇನೆ ನಡೆಸಿದ ವಾಯುದಾಳಿಯಲ್ಲಿ 14 ಮಕ್ಕಳು, ಐವರು ಮಹಿಳೆಯರು ಸೇರಿದಂತೆ ಕನಿಷ್ಠ 33 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 70ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಶಾಲಾ ಕಟ್ಟಡಗಳು ಸಂತ್ರಸ್ತ ಶಿಬಿರಗಳಾಗಿ ಕಾರ್ಯಾಚರಿಸುತ್ತಿದ್ದವು.
ದಕ್ಷಿಣ ಗಾಝಾದ ನಗರ ರಫಾವನ್ನು ಸುತ್ತುವರಿದಿರುವ ಇಸ್ರೇಲ್ ಸೇನೆಯು ಉತ್ತರ ಗಾಝಾದ ಪಟ್ಟಣಗಳಿಂದಲೂ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ವರ್ಷದ ಮಾರ್ಚ್ 18ರಂದು ಹಮಾಸ್ ವಿರುದ್ಧ ಇಸ್ರೇಲ್ ದಾಳಿ ಪುನಾರಂಭಗೊಂಡಾಗಿನಿಂದ 2.80 ಲಕ್ಷಕ್ಕೂ ಅಧಿಕ ಫೆಲೆಸ್ತೀನಿಯರನ್ನು ಬಲವಂತವಾಗಿ ಗಾಝಾದಿಂದ ತೆರವುಗೊಳಿಸಲಾಗಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಸೇನೆ ಹಾಗೂ ಹಮಾಸ್ ನಡುವೆ ಸಂಘರ್ಷ ಭುಗಿಲೆದ್ದ ಬಳಿಕ 61,700ಕ್ಕೂ ಅಧಿಕ ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ.
ಇತ್ತ ಲೆಬನಾನ್ ಹಾಗೂ ಸಿರಿಯದಲ್ಲಿಯೂ ಇಸ್ರೇಲ್ ದಾಳಿಗಳನ್ನು ಮುಂದುವರಿಸಿದೆ. ಲೆಬನಾನ್ ನ ಕರಾವಳಿ ನಗರ ಸೈಡನ್ನಲ್ಲಿರುವ ವಸತಿ ಸಂಕೀರ್ಣದಲ್ಲಿ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಶುಕ್ರವಾರ ಬೈರೂತ್ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸ್ಸನ್ ಫರ್ಹತ್, ಅವರ ಪುತ್ರ ಹಾಗೂ ಪುತ್ರಿ ಸಾವನ್ನಪ್ಪಿರುವುದನ್ನು ಲೆಬನಾನ್ ನ ಅಧಿಕಾರಿಗಳು ದೃಢಪಡಿಸಿದ್ದಾರೆ. ಸಿರಿಯದಲ್ಲಿ ಇಸ್ರೇಲ್ ದಾಳಿಯಲ್ಲಿ ಇತರ 9 ಮಂದಿ ಸಾವನ್ನಪ್ಪಿದ್ದಾರೆ.