ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯನ್ನು ಒಪ್ಪಿಕೊಂಡ ಇಸ್ರೇಲ್
Photo | Reuters
ತೆಹ್ರಾನ್ : ಹಮಾಸ್ ನ ಅತ್ಯುನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಹತ್ಯೆ ಮಾಡಿರುವುದನ್ನು ಇದೇ ಮೊದಲ ಬಾರಿಗೆ ಇಸ್ರೇಲ್ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇಸ್ಮಾಯಿಲ್ ಹನಿಯೆಹ್ ಅವರನ್ನು ನಾವೇ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಜುಲೈನಲ್ಲಿ ಇರಾನ್ ನಲ್ಲಿ ನಡೆದ ಸ್ಫೋಟದಲ್ಲಿ ಇಸ್ಮಾಯಿಲ್ ಹನಿಯೆಹ್ ಮೃತಪಟ್ಟಿದ್ದರು. ಸ್ಫೋಟದ ಹಿಂದೆ ಇಸ್ರೇಲ್ ಕೈವಾಡದ ಬಗ್ಗೆ ವ್ಯಾಪಕ ಸಂಶಯ ವ್ಯಕ್ತವಾಗಿತ್ತು.
ನಾವು ತೆಹ್ರಾನ್, ಗಾಝಾ ಮತ್ತು ಲೆಬನಾನ್ ನಲ್ಲಿ ಇಸ್ಮಾಯಿಲ್ ಹನಿಯೆಹ್, ಸಿನ್ವಾರ್ ಮತ್ತು ನಸ್ರಲ್ಲಾಗೆ ಮಾಡಿದಂತೆ ಯೆಮೆನ್ ನಲ್ಲಿ ಹೌತಿಗಳ ಮೇಲೆ ದಾಳಿ ಮಾಡುತ್ತೇವೆ. ನಾವು ತೆಹ್ರಾನ್, ಗಾಝಾ ಮತ್ತು ಲೆಬನಾನ್ ನಲ್ಲಿ ಮಾಡಿದ್ದನ್ನೇ ಹೊಡೆಡಾ ಮತ್ತು ಸನಾದಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.
2023ರ ಅಕ್ಟೋಬರ್ 7ರಂದು ಗಾಝಾ ವಿರುದ್ಧ ಯುದ್ಧ ಘೋಷಿಸಿ ಇಸ್ರೇಲ್ ಆಕ್ರಮಣವನ್ನು ಪ್ರಾರಂಭಿಸಿದೆ. ಕಳೆದ ಒಂದೂವರೆ ವರ್ಷಗಳಿಂದ ಗಾಝಾ ನಾಗರಿಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಗೆ 17,400ಕ್ಕೂ ಅಧಿಕ ಮಕ್ಕಳು ಸೇರಿದಂತೆ 46,000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.