ಗಾಝಾ ಪತ್ರಕರ್ತರ ವಿರುದ್ಧ ಕ್ರಮಕ್ಕೆ ಇಸ್ರೇಲ್ ಆಗ್ರಹ
ಟೆಲ್ಅವೀವ್ : ಅ. 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಗಾಝಾದ ಕೆಲವು ಫೋಟೊ ಜರ್ನಲಿಸ್ಟ್ಗಳು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ವರದಿ ಮಾಡಿದ್ದು ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಇಸ್ರೇಲ್ ಆಗ್ರಹಿಸಿದೆ.
ಹಮಾಸ್ ಇಸ್ರೇಲ್ನ ಗಡಿಭಾಗದ ಪ್ರದೇಶದ ಮೇಲೆ ನಡೆಸಿದ್ದ ದಾಳಿಯನ್ನು ಗಾಝಾ ಮೂಲದ ಫೋಟೊ ಜರ್ನಲಿಸ್ಟ್(ಮಾಧ್ಯಮದ ಫೋಟೊಗ್ರಾಫರ್)ಗಳು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಪ್ರಸಾರ ಮಾಡಿದ್ದಾರೆ. ಇದು ಇಸ್ರೇಲ್ ಮೇಲಿನ ದಾಳಿಯ ಬಗ್ಗೆ ಅವರಿಗೆ ಮೊದಲೇ ಮಾಹಿತಿಯಿತ್ತು ಎಂಬ ಸಂದೇಹಕ್ಕೆ ಕಾರಣವಾಗಿದೆ ಎಂದು ಇಸ್ರೇಲ್ನ ಮಾಧ್ಯಮ ನಿಗಾ ಸಂಸ್ಥೆ `ಹಾನೆಸ್ಟ್ ರಿಪೋರ್ಟಿಂಗ್' ವರದಿ ಮಾಡಿದೆ. `ಅಂತರ್ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೆಲಸ ಮಾಡುವ ಕೆಲವು ಫೋಟೊ ಜರ್ನಲಿಸ್ಟ್ಗಳು ಹಮಾಸ್ ಅ. 7ರಂದು ನಡೆಸಿದ ಕ್ರೂರ ಕೃತ್ಯಗಳಲ್ಲಿ ಕೈಜೋಡಿಸಿರುವುದು ಅತ್ಯಂತ ಖಂಡನೀಯ ಕೃತ್ಯವಾಗಿದ್ದು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪತ್ರಕರ್ತರು ಮಾನವೀಯತೆಯ ವಿರುದ್ಧದ ಅಪರಾಧಗಳಲ್ಲಿ ಸಹಚರರು ಆಗಿದ್ದು ಅವರ ಕ್ರಮಗಳು ವೃತ್ತಿಪರ ನೀತಿಗೆ ವಿರುದ್ಧವಾಗಿದೆ ' ಎಂದು ಇಸ್ರೇಲ್ ಸರಕಾರ ಆಗ್ರಹಿಸಿದೆ. 6 ಮಂದಿ ಸ್ವತಂತ್ರ ಫೋಟೊ ಜರ್ನಲಿಸ್ಟ್ಗಳ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿದ್ದು ಇವರು `ರಾಯ್ಟರ್ಸ್, ಅಸೋಸಿಯೇಟೆಡ್ ಪ್ರೆಸ್ ಮತ್ತು ನ್ಯೂಯಾರ್ಕ್ ಟೈಮ್ಸ್'ನಲ್ಲಿ ಕೆಲಸ ಮಾಡುತ್ತಿದ್ದು ಇಸ್ರೇಲ್ನ ಟ್ಯಾಂಕ್ ಬೆಂಕಿಯಲ್ಲಿ ಉರಿಯುತ್ತಿರುವ, ಹಮಾಸ್ ನಾಗರಿಕರನ್ನು ಅಪಹರಿಸುವ ಫೋಟೊವನ್ನು ತೆಗೆದಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಆದರೆ ಆರೋಪವನ್ನು ರಾಯ್ಟರ್ಸ್ ನಿರಾಕರಿಸಿದೆ.