ಲಕ್ಷದ್ವೀಪಕ್ಕೆ ಭೇಟಿ ನೀಡಲು ಪ್ರಜೆಗಳಿಗೆ ಇಸ್ರೇಲ್ ಸಲಹೆ ; ಮಾಲ್ದೀವ್ಸ್ ಕ್ರಮಕ್ಕೆ ಟೀಕೆ
ಲಕ್ಷದ್ವೀಪ | ಸಾಂದರ್ಭಿಕ ಚಿತ್ರ PTI
ಟೆಲ್ಅವೀವ್ : ಇಸ್ರೇಲಿ ಪ್ರಜೆಗಳಿಗೆ ಪ್ರವೇಶಾವಕಾಶ ನಿಷೇಧಿಸಿದ ಮಾಲ್ದೀವ್ಸ್ ಕ್ರಮವನ್ನು ಇಸ್ರೇಲ್ ಟೀಕಿಸಿದ್ದು ಲಕ್ಷದ್ವೀಪ ಸೇರಿದಂತೆ ಭಾರತದ ಬೀಚ್ಗಳನ್ನು ಸಂದರ್ಶಿಸುವಂತೆ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.
`ಮಾಲ್ದೀವ್ಸ್ ಇನ್ನು ಮುಂದೆ ಇಸ್ರೇಲಿಯನ್ನರನ್ನು ಸ್ವಾಗತಿಸುತ್ತಿಲ್ಲವಾದ್ದರಿಂದ, ಇಸ್ರೇಲಿ ಪ್ರಜೆಗಳನ್ನು ಪ್ರೀತಿಯಿಂದ ಸ್ವಾಗತಿಸುವ ಮತ್ತು ಆತಿಥ್ಯ ನೀಡುವ ಸುಂದರವಾದ ಮತ್ತು ಅದ್ಭುತವಾದ ಬೀಚ್ಗಳು ಭಾರತದಲ್ಲಿವೆ. ನಮ್ಮ ರಾಜತಾಂತ್ರಿಕರು ಭೇಟಿ ನೀಡಿದ ಸ್ಥಳಗಳನ್ನು ಆಧರಿಸಿದ ಈ ಶಿಫಾರಸುಗಳನ್ನು ಪರಿಶೀಲಿಸಿ' ಎಂದು ಭಾರತದಲ್ಲಿನ ಇಸ್ರೇಲಿ ರಾಯಭಾರಿ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಜತೆಗೆ ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್, ಗೋವ ಮತ್ತು ಕೇರಳದ ಬೀಚ್ಗಳ ಚಿತ್ರವನ್ನು ಪೋಸ್ಟ್ ಮಾಡಿದೆ.
` ಮಾಲ್ದೀವ್ಸ್ ಸರಕಾರದ ನಿರ್ಧಾರಕ್ಕೆ ಧನ್ಯವಾದಗಳು. ಇದೀಗ ಇಸ್ರೇಲಿಯನ್ನರು ಲಕ್ಷದ್ವೀಪ ಸಹಿತ ಭಾರತದ ಸುಂದರ ಬೀಚ್ಗಳನ್ನು ಸಂದರ್ಶಿಸಬಹುದು' ಎಂದು ಭಾರತದಲ್ಲಿನ ಇಸ್ರೇಲ್ ಕಾನ್ಸುಲ್ ಜನರಲ್ ಕೋಬಿ ಶೊಶಾನಿ `ಎಕ್ಸ್' ಮಾಡಿದ್ದು ಜನವರಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪದ ಪ್ರಾಕೃತಿಕ ಸೌಂದರ್ಯವನ್ನು ಶ್ಲಾಘಿಸಿದ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.
ಈ ಮಧ್ಯೆ, ಮಾಲ್ದೀವ್ಸ್ ಸರಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಮಾಲ್ದೀವ್ಸ್ಗೆ ಪ್ರಯಾಣಿಸದಂತೆ ತನ್ನ ನಾಗರಿಕರಿಗೆ ಇಸ್ರೇಲ್ ಸೂಚಿಸಿದೆ. ಇಸ್ರೇಲಿ ಪಾಸ್ಪೋರ್ಟ್ ಜತೆಗೆ ವಿದೇಶಿ ಪಾಸ್ಪೋರ್ಟ್ ಹೊಂದಿರುವ ಇಸ್ರೇಲ್ ಪ್ರಜೆಗಳಿಗೂ ಈ ಸಲಹೆ ಅನ್ವಯಿಸುತ್ತದೆ. ಈಗಾಗಲೇ ಮಾಲ್ದೀವ್ಸ್ನಲ್ಲಿ ಇರುವವರು ಅಲ್ಲಿಂದ ತಕ್ಷಣ ತೆರಳುವುದು ಒಳಿತು' ಎಂದು ಇಸ್ರೇಲ್ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ. ಕಳೆದ ವರ್ಷ ಸುಮಾರು 11,000 ಇಸ್ರೇಲಿಯನ್ನರು ಮಾಲ್ದೀವ್ಸ್ಗೆ ಭೇಟಿ ನೀಡಿದ್ದರು.
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ varthabharati.in ನೋಡ್ತಾ ಇರಿ.