ಇಸ್ರೇಲ್: ಯುದ್ಧಕಾಲದ ತುರ್ತು ಸರಕಾರ ರಚನೆ
Photo: PTI
ಟೆಲ್ ಅವೀವ್: ಇಸ್ರೇಲ್ ನಲ್ಲಿ ಯುದ್ಧಕಾಲದ ತುರ್ತು ಸಂಯುಕ್ತ ಸರಕಾರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ವಿಪಕ್ಷ ಮುಖಂಡ ಬೆನ್ನಿ ಗಾಂಟ್ಸ್ ಸಮ್ಮತಿಸಿದ್ದಾರೆ.
ಈ ಮಧ್ಯೆ, ಮಂಗಳವಾರ ರಾತ್ರಿಯಿಡೀ ಇಸ್ರೇಲ್ ಸೇನೆ ಗಾಝಾ ಪಟ್ಟಿಯಾದ್ಯಂತ ಪ್ರತೀಕಾರದ ಬಾಂಬ್ ದಾಳಿ ಮುಂದುವರಿಸಿದ್ದು ಕನಿಷ್ಟ 900 ಜನರು ಮೃತಪಟ್ಟಿದ್ದು ಇತರ 4,600 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ. ಗಾಝಾ ಪಟ್ಟಿಯಲ್ಲಿ ಹಮಾಸ್ ವಿರುದ್ಧದ ಕಾರ್ಯಾಚರಣೆ ಈಗಷ್ಟೇ ಆರಂಭವಾಗಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿ ಬುಧವಾರದ ಕೆಲವು ಬೆಳವಣಿಗೆಗಳು:
► ಹಮಾಸ್ ದಾಳಿಯಿಂದ ಇಸ್ರೇಲ್ ನಲ್ಲಿ ಮೃತಪಟ್ಟವರ ಸಂಖ್ಯೆ 1,200ನ್ನು ದಾಟಿದ್ದು ಇವರಲ್ಲಿ 155 ಯೋಧರು ಎಂದು ಅಮೆರಿಕದಲ್ಲಿನ ಇಸ್ರೇಲ್ ರಾಯಭಾರಿ ಕಚೇರಿ ಹೇಳಿದೆ.
► ಮಂಗಳವಾರ ಇಸ್ರೇಲ್ ನ ಉತ್ತರದ ಗಡಿಭಾಗದಲ್ಲಿ ಲೆಬನಾನ್ ಮತ್ತು ಸಿರಿಯಾದ ಸಶಸ್ತ್ರ ಹೋರಾಟಗಾರರ ಗುಂಪಿನ ಜತೆ ಇಸ್ರೇಲ್ ಸೇನೆ ಗುಂಡಿನ ಚಕಮಕಿ ನಡೆಸಿದ್ದು ಪ್ರಾಂತೀಯ ಸಂಘರ್ಷ ಇನ್ನಷ್ಟು ವಿಸ್ತರಿಸುವ ಅಪಾಯ ಹೆಚ್ಚಿದೆ.
► ಇಸ್ರೇಲ್ ನ ದಾಳಿ ಗಾಝಾದಲ್ಲಿನ ಯಾವುದೇ ಮನೆಗೆ ಅಪ್ಪಳಿಸಿದರೆ ಪ್ರತಿಯಾಗಿ ತನ್ನ ವಶದಲ್ಲಿರುವ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಹಮಾಸ್ ಬೆದರಿಕೆ ಒಡ್ಡಿದ್ದರೂ ಇದುವರೆಗೆ ಈ ರೀತಿ ಮಾಡಿರುವ ಮಾಹಿತಿಯಿಲ್ಲ ಎಂದು ವರದಿಯಾಗಿದೆ.
► ಯುದ್ಧದಲ್ಲಿ ಇದುವರಗೆ ಕನಿಷ್ಟ 1,900 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಆದರೆ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಬಾಂಬ್ ಗಳ ಸುರಿಮಳೆ ಸುರಿಸುತ್ತಿರುವುದರಿಂದ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
► ಸಂಘರ್ಷದಲ್ಲಿ ಇರಾನ್ ನೇರವಾಗಿ ಪಾಲ್ಗೊಂಡಿದೆ ಎಂಬ ವರದಿಗೆ ಯಾವುದೇ ಸೂಕ್ತ ಪುರಾವೆಗಳಿಲ್ಲ ಎಂದು ಜರ್ಮನಿ ಹೇಳಿದೆ.
► ಹಮಾಸ್ ದಾಳಿಯ ಬಳಿಕ ಇಸ್ರೇಲಿ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಬ್ರಿಟನ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಇಸ್ರೇಲ್ ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಬ್ರಿಟಿಷ್ ವಿದೇಶಾಂಗ ಇಲಾಖೆ ತಿಳಿಸಿದೆ.
► ಹಮಾಸ್ ನ ದಾಳಿ ಯುದ್ಧದ ನಡೆಯಾಗಿದೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡರ್ ಲಿಯೆನ್ ಖಂಡಿಸಿದ್ದಾರೆ.
► ಇಸ್ರೇಲ್ ನ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಹಮಾಸ್ ನ ಕ್ಷಿಪಣಿ ದಾಳಿ ಮುಂದುವರಿದಿದ್ದು ಪ್ರಮುಖ ವಿಮಾನನಿಲ್ದಾಣಗಳಲ್ಲಿ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ. ಗಾಝದಿಂದ ಅಶ್ಕೆಲಾನ್ ನಗರದತ್ತ ಮತ್ತೆ ರಾಕೆಟ್ ದಾಳಿ ನಡೆದಿದೆ.
-----
ಗಾಝಾದ ವಿದ್ಯುತ್ ಸ್ಥಾವರ ಸ್ಥಗಿತ
ಗಾಝಾ: ಗಾಝಾ ಪಟ್ಟಿಗೆ ಆಹಾರ ಮತ್ತು ಇಂಧನ ಪೂರೈಕೆಗೆ ಇಸ್ರೇಲ್ ದಿಗ್ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಗಾಝಾದ ಏಕೈಕ ವಿದ್ಯುತ್ ಸ್ಥಾವರದಲ್ಲಿ ಇಂಧನ ಖಾಲಿಯಾಗಿದ್ದು ಸ್ಥಾವರನ್ನು ಮುಚ್ಚಲಾಗಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಈ ಪ್ರಾಂತದಲ್ಲಿ ಜನರೇಟರ್ಗಳ ಮೂಲಕ ಮಾತ್ರ ವಿದ್ಯುತ್ ಬಳಸುವ ಸ್ಥಿತಿಯಿದೆ ಎಂದು ಇಂಧನ ಸಚಿವಾಲಯ ಮಾಹಿತಿ ನೀಡಿದೆ.
-------------
ಒತ್ತೆಯಾಳುಗಳ ಬಿಡುಗಡೆಗೆ ವಿಶೇಷ ಕಾರ್ಯಪಡೆ ಸಜ್ಜು
ಟೆಲ್ ಅವೀವ್: ಇಸ್ರೇಲ್ ನ ಅತ್ಯಂತ ಪ್ರಮುಖವಾದ ವಿಶೇಷ ಕಾರ್ಯಪಡೆ `ಸಯರೆಟ್ ಮಟ್ಕಲ್' ಗಾಝಾ ಪಟ್ಟಿಯಲ್ಲಿ ಹಮಾಸ್ ನ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಅತ್ಯಂತ ಅಪಾಯಕಾರಿ ಕಾರ್ಯಾಚರಣೆಗೆ ಸಜ್ಜುಗೊಂಡಿದೆ ಎಂದು `ದಿ ಟೆಲಿಗ್ರಾಫ್' ವರದಿ ಮಾಡಿದೆ.
ಪ್ರಧಾನ ಸಿಬಂದಿ ವಿಚಕ್ಷಣ ಘಟಕ ಎಂದೂ ಕರೆಯಲಾಗುವ ಸಯರೆಟ್ ಮಟ್ಕಲ್, ಮೂಲಭೂತವಾಗಿ ಕ್ಷೇತ್ರ ಗುಪ್ತಚರ ಮಾಹಿತಿ ಸಂಗ್ರಹಿಸುವ ಘಟಕವಾಗಿದ್ದು ಶತ್ರುಗಳ ನೆಲೆಗೆ ಪ್ರವೇಶಿಸಿ ಬೇಹುಗಾರಿಕೆ ನಡೆಸುವ ಮತ್ತು ಒತ್ತೆಯಾಳು ಬಿಡುಗಡೆ ಕಾರ್ಯಾಚರಣೆಯಲ್ಲಿ ವಿಶೇಷ ಪರಿಣತಿ ಹೊಂದಿದೆ ಎಂದು ಇಸ್ರೇಲ್ ನ ಭದ್ರತಾ ಪಡೆಯ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.