ಗಾಝಾದಲ್ಲಿ ಇಸ್ರೇಲ್ನಿಂದ ಮಾನವ ಹಕ್ಕುಗಳ ವ್ಯಾಪಕ ಕಡೆಗಣನೆ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರ ವರದಿ

ಸಾಂದರ್ಭಿಕ ಚಿತ್ರ | PC : PTI
ಜಿನೆವಾ: ಗಾಝಾದಲ್ಲಿ ನಡೆಸುತ್ತಿರುವ ಮಿಲಿಟರಿ ಕ್ರಮಗಳಲ್ಲಿ ಇಸ್ರೇಲ್ ಮಾನವ ಹಕ್ಕುಗಳನ್ನು ಅಸಾಮಾನ್ಯ ರೀತಿಯಲ್ಲಿ ಕಡೆಗಣಿಸಿದೆ ಮತ್ತು ಹಮಾಸ್ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರು ಆರೋಪಿಸಿದ್ದಾರೆ.
ಅಂತರಾಷ್ಟ್ರೀಯ ಕಾನೂನನ್ನು ಸತತವಾಗಿ ಉಲ್ಲಂಘಿಸಿದ ಗಾಝಾದಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ ಭಯಾನಕ ವಿಧಾನವನ್ನು ಸಮರ್ಥಿಸಲಾಗದು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ.
ಗಾಝಾ, ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ಜಿನೆವಾದಲ್ಲಿ ಮಾನವ ಹಕ್ಕುಗಳ ಸಮಿತಿಗೆ ಸಲ್ಲಿಸಿದ ಹೊಸ ವರದಿಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದ ಅಕ್ಟೋಬರ್ 7ರಿಂದ ಹಮಾಸ್ ಕೂಡಾ ಹಲವು ಉಲ್ಲಂಘನೆಗಳನ್ನು ಮಾಡಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ (ಒಎಚ್ಸಿಎಚ್ಆರ್) ಆರೋಪಿಸಿದೆ . ಹಮಾಸ್ ವಿವೇಚನೆಯಿಲ್ಲದೆ ಸ್ಫೋಟಕಗಳನ್ನು ಇಸ್ರೇಲ್ ಪ್ರದೇಶದತ್ತ ಹಾರಿಸಿದ್ದು ಇದು ಯುದ್ಧಾಪರಾಧಗಳಿಗೆ ಕಾರಣವಾಗಿದೆ ಎಂದು ಟರ್ಕ್ ಹೇಳಿದ್ದಾರೆ. ಗಾಝಾದಲ್ಲಿ ಶಾಲೆಗಳು, ಆಸ್ಪತ್ರೆಗಳು, ಮನೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿನಾಶ ಸಂಭವಿಸಿದೆ. ಇಸ್ರೇಲ್ ವಿಧಿಸಿದ ನಿರ್ಬಂಧಗಳು ಮಾನವೀಯ ದುರಂತವನ್ನು ಸೃಷ್ಟಿಸಿವೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ಮಾನವ ಹಕ್ಕುಗಳ ಸಮಿತಿಯ 58ನೇ ಸಮಾವೇಶದಲ್ಲಿ ಮಾತನಾಡಿದ ಟರ್ಕ್ ` ಮಿಲಿಟರಿ ಉದ್ದೇಶಗಳು ಸೇರಿದಂತೆ ಗಾಝಾದಲ್ಲಿ ಮಾನವೀಯ ಕಾನೂನುಗಳ ಉದ್ದೇಶಪೂರ್ವಕ ಉಲ್ಲಂಘನೆ ಮಾಡಿರಬಹುದು. ಎಲ್ಲಾ ಉಲ್ಲಂಘನೆಗಳ ಬಗ್ಗೆಯೂ ಸ್ವತಂತ್ರ ತನಿಖೆ ನಡೆಯಬೇಕು' ಎಂದು ಆಗ್ರಹಿಸಿದರು. ಪೂರ್ಣ ಹೊಣೆಗಾರಿಕೆಯನ್ನು ಗುರುತಿಸಲು ಇಸ್ರೇಲಿ ನ್ಯಾಯ ವ್ಯವಸ್ಥೆಯ ಇಚ್ಛಾಶಕ್ತಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಟರ್ಕ್, ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಹಕ್ಕುಗಳ ಉಲ್ಲಂಘನೆಗೆ ಜವಾಬ್ದಾರರನ್ನು ಶಿಕ್ಷಿಸಲು ಹಮಾಸ್ ಮತ್ತು ಇತರ ಗುಂಪುಗಳು ಕೈಗೊಂಡ ಯಾವುದೇ ಕ್ರಮಗಳ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದರು. ಎಲ್ಲಾ ಕಡೆಯವರಿಂದಲೂ ಆಗಿರಬಹುದಾದ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸುವ ನಿಟ್ಟಿನಲ್ಲಿ ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶ ಮತ್ತು ಇಸ್ರೇಲ್ಗೆ ಪ್ರವೇಶಕ್ಕೆ ಅವಕಾಶ ಕೋರಿ ಸಲ್ಲಿಸಲಾದ ಮನವಿಗೆ ಇಸ್ರೇಲ್ನಿಂದ ಯಾವುದೇ ಪ್ರತಿಕ್ರಿಯೆಯಿಲ್ಲ ಎಂದು ಒಎಚ್ಸಿಎಚ್ಆರ್ ವರದಿ ಹೇಳಿದೆ.
ಸಮಿತಿ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಫೆಲೆಸ್ತೀನಿಯನ್ ಪ್ರತಿನಿಧಿ ಇಬ್ರಾಹಿಂ ಕ್ರೈಶಿ `ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲ್ ಫೆಲೆಸ್ತೀನೀಯರ ವಿರುದ್ಧ ಯುದ್ಧಾಪರಾಧ ಮತ್ತು ನರಮೇಧ ಎಸಗುತ್ತಿದೆ. ಈ ಪ್ರದೇಶಕ್ಕೆ ಮಾನವೀಯ ನೆರವು ಪೂರೈಕೆಯನ್ನು ನಿರಾಕರಿಸುತ್ತಿದೆ ಮತ್ತು. ಔಷಧ ಹಾಗೂ ಆಹಾರಗಳ ಪೂರೈಕೆಗೂ ಅಡ್ಡಿಪಡಿಸುತ್ತಿದೆ' ಎಂದು ಆರೋಪಿಸಿದರು.
ಕಳೆದ ತಿಂಗಳು ಇಸ್ರೇಲ್ ಪಶ್ಚಿಮದಂಡೆಯ ಉತ್ತರ ಪ್ರಾಂತದ ಜೆನಿನ್ ಮತ್ತು ತುಲ್ಕಾರ್ಮ್ ನಗರಗಳಲ್ಲಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಕನಿಷ್ಟ 40,000 ಫೆಲೆಸ್ತೀನೀಯರು ತಮ್ಮ ಮನೆಯಿಂದ ನಿರ್ಗಮಿಸಿದ್ದಾರೆ. ಪಶ್ಚಿಮದಂಡೆಯಲ್ಲಿ ಇಸ್ರೇಲ್ ವಸಾಹತುಗಾರರ ಹಿಂಸಾಚಾರ ಹೆಚ್ಚಿದೆ ಎಂದು ಅವರು ಖಂಡಿಸಿದ್ದಾರೆ. ಫೆಲೆಸ್ತೀನೀಯರ ವಿರುದ್ಧದ ಭಯಾನಕ ಹಿಂಸಾಚಾರ ಇದುವರೆಗೆ ಕಂಡು ಕೇಳರಿಯದ ಮಟ್ಟ ತಲುಪಿದೆ ಎಂದು ದಕ್ಷಿಣ ಆಫ್ರಿಕಾದ ಪ್ರತಿನಿಧಿ ಬ್ರೋನ್ವೆನ್ ಲೆವಿ ಕಳವಳ ವ್ಯಕ್ತಪಡಿಸಿದ್ದಾರೆ. ಸ್ವತಂತ್ರ ತನಿಖೆಯ ಆಗ್ರಹಕ್ಕೆ ಯುರೋಪಿಯನ್ ಯೂನಿಯನ್ ಧ್ವನಿಗೂಡಿಸಿದ್ದು ಹಮಾಸ್ನ ಆಕ್ರಮಣವನ್ನು ಮತ್ತು ಪಶ್ಚಿಮದಂಡೆ ಹಾಗೂ ಪೂರ್ವ ಜೆರುಸಲೇಂನಲ್ಲಿ ಇಸ್ರೇಲ್ನ ಕಾರ್ಯಾಚರಣೆಯನ್ನು ಖಂಡಿಸಿದೆ. ಸೌದಿ ಅರೆಬಿಯಾ, ಕುವೈಟ್, ಇರಾಕ್ ಸೇರಿದಂತೆ ಅರಬ್ ರಾಷ್ಟ್ರಗಳು ಯುದ್ಧ ಕೊನೆಗೊಳ್ಳಬೇಕೆಂಬ ಆಗ್ರಹವನ್ನು ಪುನರುಚ್ಚರಿಸಿವೆ ಮತ್ತು ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಕರೆ ನೀಡಿವೆ.