ಗಾಝಾಕ್ಕೆ ನೆರವು ಪೂರೈಕೆ ಅಮಾನತುಗೊಳಿಸಿದ ಇಸ್ರೇಲ್
►ಕದನ ವಿರಾಮ ವಿಸ್ತರಣೆಗೆ ಅಮೆರಿಕ ಪ್ರಸ್ತಾಪ ►ಇಸ್ರೇಲ್ನಿಂದ ಯುದ್ದಾಪರಾಧ: ಹಮಾಸ್ ಆಕ್ರೋಶ

PC : NDTV
ಟೆಲ್ ಅವೀವ್: ಯುದ್ಧದಿಂದ ಜರ್ಝರಿತಗೊಂಡಿರುವ ಫೆಲೆಸ್ತೀನ್ ಪ್ರದೇಶದಲ್ಲಿ ಕದನ ವಿರಾಮ ವಿಸ್ತರಿಸುವುದನ್ನು ಹಮಾಸ್ ಒಪ್ಪದಿದ್ದರೆ ಗಾಝಾ ಪಟ್ಟಿಗೆ ಎಲ್ಲಾ ಮಾನವೀಯ ನೆರವು ಮತ್ತು ಸರಬರಾಜುಗಳನ್ನು ಅಮಾನತುಗೊಳಿಸುವುದಾಗಿ ಇಸ್ರೇಲ್ ರವಿವಾರ ಘೋಷಿಸಿದೆ.
ಗಾಝಾಕ್ಕೆ ನೆರವು ಅಮಾನತು ಯುದ್ದಾಪರಾಧವಾಗಿದೆ ಎಂದು ಹಮಾಸ್ ಪ್ರತಿಕ್ರಿಯಿಸಿದೆ.ಕದನ ವಿರಾಮವನ್ನು ವಿಸ್ತರಿಸುವ ಅಮೆರಿಕದ ಪ್ರಸ್ತಾಪವನ್ನು ಹಮಾಸ್ ತಿರಸ್ಕರಿಸಿದರೆ `ಹೆಚ್ಚುವರಿ ಪರಿಣಾಮ' ಎದುರಿಸಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಎಚ್ಚರಿಕೆ ನೀಡಿದೆ.
ಗಾಝಾಕ್ಕೆ ಮಾನವೀಯ ನೆರವು ಪೂರೈಕೆ ಹೆಚ್ಚಲು ಕಾರಣವಾದ ಕದನ ವಿರಾಮದ ಪ್ರಾರಂಭಿಕ ಹಂತ ಮಾರ್ಚ್ 1ರಂದು ಮುಕ್ತಾಯಗೊಂಡಿದೆ. ಆದರೆ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ಪಡೆಗಳು ಹಿಂದಕ್ಕೆ ಸರಿಯುವ ಮತ್ತು ಶಾಶ್ವತ ಕದನ ವಿರಾಮಕ್ಕೆ ಅನುವು ಮಾಡಿಕೊಡುವ ಎರಡನೇ ಹಂತಕ್ಕೆ ಸಂಬಂಧಿಸಿದ ಮಾತುಕತೆ ಇನ್ನೂ ಪ್ರಾರಂಭಗೊಂಡಿಲ್ಲ.
ಎಪ್ರಿಲ್ 20ರವರೆಗೆ ಕದನ ವಿರಾಮವನ್ನು ವಿಸ್ತರಿಸುವ ಪ್ರಸ್ತಾಪವನ್ನು ಅಮೆರಿಕದ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮುಂದಿರಿಸಿದ್ದು ಇದನ್ನು ಇಸ್ರೇಲ್ ಬೆಂಬಲಿಸಿದೆ.
ಈ ಪ್ರಸ್ತಾಪದ ಪ್ರಕಾರ, ಹಮಾಸ್ ಒತ್ತೆಸೆರೆಯಲ್ಲಿರುವ 50%ದಷ್ಟು ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಉಳಿದವರನ್ನು ಶಾಶ್ವತ ಕದನ ವಿರಾಮ ಒಪ್ಪಂದ ಏರ್ಪಟ್ಟ ಬಳಿಕ ಬಿಡುಗಡೆಗೊಳಿಸಬೇಕು.
`ಈ ಹಂತದಲ್ಲಿ ಯುದ್ಧವನ್ನು ಅಂತ್ಯಗೊಳಿಸುವ ಬಗ್ಗೆ ಎರಡೂ ಕಡೆಯವರ ನಿಲುವಿನಲ್ಲಿ ಇರುವ ಅಂತರವನ್ನು ದೂರಗೊಳಿಸಲು ಸಾಧ್ಯವಾಗದು ಎಂದು ಅಮೆರಿಕದ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಖಚಿತಪಡಿಸಿಕೊಂಡ ಹಿನ್ನೆಲೆಯಲ್ಲಿ ಶಾಶ್ವತ ಕದನ ವಿರಾಮ ಮಾತುಕತೆಗೆ ಇನ್ನಷ್ಟು ಸಮಯದ ಅಗತ್ಯವಿದೆ' ಎಂದು ಇಸ್ರೇಲ್ ಪ್ರಧಾನಿಯ ಕಚೇರಿ ಹೇಳಿಕೆ ನೀಡಿದೆ. ಇಸ್ರೇಲ್ ಪ್ರಕಾರ, ಗಾಝಾದಲ್ಲಿ ಇನ್ನೂ ಒತ್ತೆಸೆರೆಯಲ್ಲಿರುವ 59 ಒತ್ತೆಯಾಳುಗಳಲ್ಲಿ 32 ಮಂದಿ ಮೃತಪಟ್ಟಿದ್ದಾರೆ.
ಎರಡನೇ ಹಂತದ ಕುರಿತ ಮಾತುಕತೆ ಫೆಬ್ರವರಿ ಪ್ರಥಮ ವಾರದಲ್ಲಿ ಆರಂಭಗೊಳ್ಳಬೇಕಿತ್ತು. ಈ ಮಧ್ಯೆ, ಕದನ ವಿರಾಮ ಒಪ್ಪಂದದ ಮಾತುಕತೆಯನ್ನು ಮುಂದುವರಿಸುವಂತೆ ಆಗ್ರಹಿಸಿ ಇಸ್ರೇಲ್ನಲ್ಲಿ ಶನಿವಾರ ಬೃಹತ್ ಜಾಥಾ ನಡೆದಿರುವುದಾಗಿ ವರದಿಯಾಗಿದೆ.
*ಹಮಾಸ್ ವಿರೋಧ:
ಗಾಝಾಕ್ಕೆ ಎಲ್ಲಾ ಮಾನವೀಯ ನೆರವು, ಸರಬರಾಜುಗಳನ್ನು ತಡೆಹಿಡಿದ ಇಸ್ರೇಲ್ ಕ್ರಮವನ್ನು ಹಮಾಸ್ ವಿರೋಧಿಸಿದ್ದು ಇಸ್ರೇಲ್ `ಬ್ಲ್ಯಾಕ್ಮೇಲ್' ನಡೆಸುತ್ತಿದೆ ಎಂದು ಆರೋಪಿಸಿದೆ. ಇಸ್ರೇಲ್ನ ಕ್ರಮ `ಕ್ಷುಲ್ಲಕ ವರ್ತನೆ, ಯುದ್ದಾಪರಾಧ ಮತ್ತು ಕದನ ವಿರಾಮ ಒಪ್ಪಂದದ ವಿರುದ್ಧದ ನಾಚಿಕೆಯಿಲ್ಲದ ದಂಗೆಯಾಗಿದ್ದು ಈಜಿಪ್ಟ್ ಮತ್ತು ಖತರ್ ಮಧ್ಯಸ್ಥಿಕೆದಾರರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಹಮಾಸ್ ಆಗ್ರಹಿಸಿದೆ.
ಒಪ್ಪಂದದಡಿಯ ತನ್ನ ಜವಾಬ್ದಾರಿಗಳನ್ನು ಪೂರ್ಣಗೊಳಿಸಲು ಒತ್ತಡ ಹೇರುವಂತೆ ಮಧ್ಯಸ್ಥಿಕೆದಾರರನ್ನು ಒತ್ತಾಯಿಸುತ್ತೇವೆ. ಒಪ್ಪಂದಕ್ಕೆ ಬದ್ಧವಾಗಿರುವುದು ಮತ್ತು ಎರಡನೇ ಹಂತದ ಮಾತುಕತೆಯನ್ನು ಆರಂಭಿಸುವುದು ಒತ್ತೆಯಾಳುಗಳನ್ನು ಮರಳಿ ಪಡೆಯಲು ಇರುವ ಏಕೈಕ ಮಾರ್ಗವಾಗಿದೆ. ಒತ್ತಡಕ್ಕೆ ನಾವು ಬಗ್ಗುವುದಿಲ್ಲ' ಎಂದು ಹಮಾಸ್ನ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.