ಗಾಝಾದಲ್ಲಿ ಸಂತಾನಾಭಿವೃದ್ಧಿ ಕೇಂದ್ರಗಳ ಮೇಲಿನ ಇಸ್ರೇಲ್ ದಾಳಿಯು ನರಮೇಧ ಕೃತ್ಯ: ವಿಶ್ವಸಂಸ್ಥೆಯ ತನಿಖಾ ವರದಿಯಲ್ಲಿ ಉಲ್ಲೇಖ

PC | NDTV
ಜಿನೆವಾ: ಸಂತಾನಾಭಿವೃದ್ಧಿ ಆರೋಗ್ಯ ಸೌಲಭ್ಯಗಳ ವ್ಯವಸ್ಥಿತ ನಾಶದ ಮೂಲಕ ಇಸ್ರೇಲ್ ಗಾಝಾದಲ್ಲಿ ನರಮೇಧ ಕೃತ್ಯಗಳನ್ನು ನಡೆಸಿದೆ ಎಂದು ವಿಶ್ವಸಂಸ್ಥೆಯ ತನಿಖಾ ವರದಿ ಹೇಳಿದೆ.
`ಫೆಲೆಸ್ತೀನ್ ಪ್ರದೇಶದ ಮುಖ್ಯ ಫಲವತ್ತತೆ ಕೇಂದ್ರದ ಮೇಲೆ ಉದ್ದೇಶಪೂರ್ವಕ ದಾಳಿ ಮಾಡಿ ನಾಶಗೊಳಿಸಿತು. ಜೊತೆಗೆ ಸುರಕ್ಷಿತ ಗರ್ಭಧಾರಣೆಗಳು, ಹೆರಿಗೆಗಳು ಹಾಗೂ ನವಜಾತ ಶಿಶುಗಳ ಆರೈಕೆಯನ್ನು ಖಾತರಿಪಡಿಸುವ ಔಷಧಿ ಹಾಗೂ ನೆರವು ಪೂರೈಕೆಗೆ ಅಡ್ಡಿಪಡಿಸಿದೆ' ಎಂದು ವಿಶ್ವಸಂಸ್ಥೆಯ ತನಿಖಾ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಸ್ರೇಲಿ ಅಧಿಕಾರಿಗಳು ಸಂತಾನಾಭಿವೃದ್ಧಿ ಆರೋಗ್ಯ ರಕ್ಷಣೆಯ ವ್ಯವಸ್ಥಿತ ವಿನಾಶದ ಮೂಲಕ ಗಾಝಾದ ಸಂತಾನಾಭಿವೃದ್ಧಿ ಸಾಮರ್ಥ್ಯವನ್ನು ಭಾಗಶಃ ನಾಶಪಡಿಸಿದ್ದಾರೆ. ಗಾಝಾದಲ್ಲಿ ಇಸ್ರೇಲ್ ನ ಕಾರ್ಯಾಚರಣೆಯ ಸಂದರ್ಭ ನಡೆದ ಈ ಪ್ರಕ್ರಿಯೆ ಎರಡು ವರ್ಗಗಳ ನರಮೇಧ ಕೃತ್ಯಕ್ಕೆ ಸಮವಾಗಿದೆ. ` ಉದ್ದೇಶಪೂರ್ವಕ ಕೃತ್ಯದ ಮೂಲಕ ಜನಸಮುದಾಯದ ವಿನಾಶದ ಪ್ರಯತ್ನ' ಮತ್ತು ಗುಂಪಿನ ಒಳಗಿನ ಜನನವನ್ನು ತಡೆಗಟ್ಟಲು ಉದ್ದೇಶಿಸಿರುವ ಕ್ರಮಗಳನ್ನು ಇಸ್ರೇಲ್ ಹೇರಿದೆ ಎಂದು ತನಿಖಾ ಆಯೋಗ ಹೇಳಿದೆ. ಈ ಅಪರಾಧವನ್ನು ವಿಶ್ವಸಂಸ್ಥೆಯ `ನರಮೇಧದ ಅಪರಾಧ ತಡೆಗಟ್ಟುವಿಕೆ ಮತ್ತು ಶಿಕ್ಷೆಯ ಸಮಾವೇಶವು' ರಾಷ್ಟ್ರೀಯ, ಜನಾಂಗೀಯ ಅಥವಾ ಧಾರ್ಮಿಕ ಗುಂಪುಗಳನ್ನು ಸಂಪೂರ್ಣ ಅಥವಾ ಭಾಗಶಃ ನಾಶಮಾಡುವ ಉದ್ದೇಶದಿಂದ ಮಾಡಿದ ಕೃತ್ಯ ಎಂದು ವ್ಯಾಖ್ಯಾನಿಸಿದೆ.
ಈ ಉಲ್ಲಂಘನೆಗಳು ಮಹಿಳೆಯರು ಮತ್ತು ಹುಡುಗಿಯರಿಗೆ ತಕ್ಷಣದ ತೀವ್ರ ಯಾತನೆ, ಗಂಭೀರ ದೈಹಿಕ ಮತ್ತು ಮಾನಸಿಕ ಹಾನಿಯನ್ನು ಉಂಟು ಮಾಡುವ ಜೊತೆಗೆ ಒಂದು ಗುಂಪಾಗಿ ಫೆಲೆಸ್ತೀನೀಯರ ಮಾನಸಿಕ ಆರೋಗ್ಯ , ಸಂತಾನಾಭಿವೃದ್ಧಿ ಮತ್ತು ಫಲವತ್ತತೆ ಭವಿಷ್ಯದ ಮೇಲೆ ಬದಲಾಯಿಸಲಾಗದ ದೀರ್ಘಕಾಲೀನ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಆಯೋಗದ ಅಧ್ಯಕ್ಷ ನವಿ ಪಿಳ್ಳೈ ಹೇಳಿದ್ದಾರೆ.
ಫೆಲೆಸ್ತೀನ್ ಪ್ರದೇಶಗಳು ಮತ್ತು ಇಸ್ರೇಲ್ ನಲ್ಲಿ ಆರೋಪಿತ ಅಂತರಾಷ್ಟ್ರೀಯ ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸ್ವತಂತ್ರ ಅಂತರಾಷ್ಟ್ರೀಯ ತನಿಖಾ ಆಯೋಗವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯು 2021ರ ಮೇ ತಿಂಗಳಿನಲ್ಲಿ ರಚಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಪಿಳ್ಳೈ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು ಮತ್ತು ರುವಾಂಡಾಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಗಾಝಾದಲ್ಲಿ ಹೆರಿಗೆ ಆಸ್ಪತ್ರೆಗಳು ಹಾಗೂ ವಾರ್ಡ್ಗಳನ್ನು ಹಾಗೂ ಗಾಝಾ ಪ್ರದೇಶದ ಪ್ರಮುಖ ಫಲವತ್ತತೆ ಕೇಂದ್ರ `ಅಲ್-ಬಾಸ್ಮಾ ಐವಿಎಫ್ ಕೇಂದ್ರ'ವನ್ನು ವ್ಯವಸ್ಥಿತವಾಗಿ ನಾಶಗೊಳಿಸಲಾಗಿದೆ. 2023ರ ಡಿಸೆಂಬರ್ನಲ್ಲಿ ಅಲ್-ಬಾಸ್ಮಾ ಕೇಂದ್ರದ ಮೇಲೆ ನಡೆದ ಶೆಲ್ ದಾಳಿಯು ಸುಮಾರು 4,000 ಬ್ರೂಣಗಳನ್ನು ನಾಶಗೊಳಿಸಿದೆ. ಇಸ್ರೇಲ್ ನ ಭದ್ರತಾ ಪಡೆಗಳು ಕೇಂದ್ರದ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸಿ ವೈದ್ಯಕೀಯ ಕೇಂದ್ರವನ್ನು ನಾಶಗೊಳಿಸಿದೆ. ಈ ಕಟ್ಟಡವು ಮಿಲಿಟರಿ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆ ಲಭಿಸಿಲ್ಲ ಎಂದು ತನಿಖಾ ವರದಿ ಹೇಳಿದೆ.
ವಿನಾಶವು ಗಾಝಾದಲ್ಲಿನ ಫೆಲೆಸ್ತೀನಿಯನ್ನರಲ್ಲಿ ಜನನವನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದ್ದು ಇದು ನರಮೇಧದ ಕೃತ್ಯ ಎಂದು ತೀರ್ಮಾನಿಸಬಹುದು ಎಂದು ವರದಿ ಹೇಳಿದೆ.
►ರಾಜಕೀಯ ಅಜೆಂಡಾ: ಇಸ್ರೇಲ್ ಆರೋಪ
ಇಸ್ರೇಲ್ ಪಡೆಗಳನ್ನು ದೋಷಾರೋಪಣೆ ಮಾಡುವ ನಾಚಿಕೆಗೇಡಿನ ಪ್ರಯತ್ನದಲ್ಲಿ ವಿಶ್ವಸಂಸ್ಥೆ ತನಿಖಾ ಆಯೋಗವು ಪೂರ್ವನಿರ್ಧರಿತ ಮತ್ತು ತಾರತಮ್ಯದ ರಾಜಕೀಯ ಕಾರ್ಯಸೂಚಿಯನ್ನು ಮುನ್ನಡೆಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ.
ಆಯೋಗದ ವರದಿಯಲ್ಲಿ ಉಲ್ಲೇಖಿಸಿದ ಆಧಾರರಹಿತ ಆರೋಪಗಳನ್ನು ಇಸ್ರೇಲ್ ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಎಂದು ವಿಶ್ವಸಂಸ್ಥೆಗೆ ಇಸ್ರೇಲ್ ನ ನಿಯೋಗ ಹೇಳಿದೆ.