ಇಸ್ರೇಲ್-ಗಾಝಾ ದಾಳಿ: ಸಾವಿನ ಸಂಖ್ಯೆ ಸಾವಿರಕ್ಕೇರಿಕೆ
ಹಮಾಸ್ ದಾಳಿಯಲ್ಲಿ 600ಕ್ಕೂ ಅಧಿಕ ಇಸ್ರೇಲಿ ನಾಗರಿಕರು,ಸೈನಿಕರ ಸಾವು ►ಗಾಝಾದಲ್ಲಿ ಇಸ್ರೇಲ್ನ ಪ್ರತೀಕಾರ ದಾಳಿಗೆ 350 ಫೆಲೆಸ್ತೀನ್ ನಾಗರಿಕರ ಬಲಿ
Photo: NDTV
ಜೆರುಸಲೇಂ: ಇಸ್ರೇಲ್ ಮೇಲೆ ಶನಿವಾರ ಫೆಲೆಸ್ತೀನ್ ಹೋರಾಟಗಾರ ಗುಂಪು ಹಮಾಸ್ನ ಆಕ್ರಮಣ ಹಾಗೂ ಆನಂತರ ಇಸ್ರೇಲ್ ಪಶ್ಚಿಮದಂಡೆಯ ಗಾಝಾನಗರದ ಮೇಲೆ ನಡೆಸಿದ ಪ್ರತೀಕಾರ ದಾಳಿಗಳಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ರವಿವಾರ ಸಾವಿರ ದಾಟಿದೆ.
ರವಿವಾರವೂ ದಕ್ಷಿಣ ಇಸ್ರೇಲ್ ಹಲವಾರು ಪ್ರದೇಶಗಳಲ್ಲಿ ಫೆಲೆಸ್ತೀನ್ ಹೋರಾಟಗಾರರು ಹಾಗೂ ಇಸ್ರೇಲಿ ಸೈನಿಕರ ನಡುವೆ ಭೀಕರ ಕಾಳಗ ಮುಂದುವರಿದಿದೆ. ಪ್ರತೀಕಾರ ದಾಳಿಯಾಗಿ ಇಸ್ರೇಲ್ ಸೇನೆ ಪಶ್ಚಿಮದಂಡೆಯ ಗಾಝಾ ನಗರದ ಮೇಲೆ ಕ್ಷಿಪಣಿ, ರಾಕೆಟ್ಗಳಿಂದ ದಾಳಿ ನಡೆಸಿದ್ದು, ಹಲವಾರು ಕಟ್ಟಡಗಳು ನೆಲಸಮಗೊಂಡಿವೆ, 350ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ನೂರಕ್ಕೂ ಅಧಿಕ ಇಸ್ರೇಲಿ ಪ್ರಜೆಗಳನ್ನು ಹಮಾಸ್ ಒತ್ತೆಸೆರೆ ಇರಿಸಿಕೊಂಡಿರುವುದಾಗಿ ವರದಿಯಾಗಿದೆ. ಗಾಝಾದಲ್ಲಿ 426 ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಗಾಝಾ ನಗರದ ಮಧ್ಯಭಾಗದಲ್ಲಿರುವ ಹಮಾಸ್ ಕಚೇರಿಗಳು ಸೇರಿದಂತೆ 12ಕ್ಕೂ ಅಧಿಕ ವಸತಿಕಟ್ಟಡಗಳು ದಾಳಿಯಲ್ಲಿ ನೆಲಸಮವಾಗಿವೆ. ಹಮಾಸ್ ಹೋರಾಟಗಾರರ ದಾಳಿಯಲ್ಲಿ ಸಾವನ್ನಪ್ಪಿರುವ ಇಸ್ರೇಲಿ ನಾಗರಿಕರ ಸಂಖ್ಯೆ 600ಕ್ಕೆ ತಲುಪಿದೆ ಹಾಗೂ 2,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ‘ಅಲ್ಜಝೀರಾ’ ಸುದ್ದಿವಾಹಿನಿ ವರದಿ ಮಾಡಿದೆ. ಪಶ್ಚಿಮದಂಡೆಯ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಶನಿವಾರ ರಾತ್ರಿಯಿಂದ ನಡೆಸಿದ ಪ್ರತೀಕಾರ ದಾಳಿಯಲ್ಲಿ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ 1,500 ಮಂದಿ ಗಾಯಗೊಂಡಿದ್ದಾರೆಂದು ಮಾಧ್ಯಮ ವರದಿಗಳು ತಿಳಿಸಿವೆ. ದಕ್ಷಿಣ ಇಸ್ರೇಲ್ನಲ್ಲಿ ಹಲವಾರು ಗ್ರಾಮಗಳನ್ನು ಹಾಗೂ ಪಟ್ಟಣಗಳನ್ನು ಒತ್ತೆಸೆರೆ ಇರಿಸಿಕೊಂಡಿರುವ ಹಮಾಸ್ ಹೋರಾಟಗಾರರನ್ನು ಬಗ್ಗುಬಡಿಯಲು ಇಸ್ರೇಲ್ ಸೇನೆಗೆ ಇನ್ನೂ ಸಾಧ್ಯವಾಗಿಲ್ಲವೆಂದು ಅದು ವರದಿ ಮಾಡಿದೆ. ದಕ್ಷಿಣ ಇಸ್ರೇಲ್ನ ಅ್ಕೆಲೊನ್ ಹಾಗೂ ಮತ್ತಿತರ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಹಾಗೂ ಫೆಲೆಸ್ತೀನ್ ಹೋರಾಟಗಾರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ.
ಕದನ ಭೀಕರ ಸ್ವರೂಪವನ್ನು ತಾಳಿದ್ದು, ಹಮಾಸ್ ಹೋರಾಟಗಾರರಿಗೆ ಇನ್ನಷ್ಟು ಶಸ್ತ್ರಾಸ್ತ್ರಗಳು ಪೂರೈಕೆಯಾಗಿವೆ ಹಾಗೂ ಅವರು ರವಿವಾರ ದಕ್ಷಿಣ ಇಸ್ರೇಲ್ನ ಕಿಬ್ತುಝ್ ಮಾಗೆನ್ ಪಟ್ಟಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಅಲ್ಜಝೀರಾ ಸುದ್ದಿಸಂಸ್ಥೆ ವರದಿ ಮಾಡಿದೆ. ದಕ್ಷಿಣ ಇಸ್ರೇಲ್ನ ಕರಾವಳಿ ಪ್ರದೇಶದ ಸಮೀಪದಲ್ಲಿರುವ ಮರುಭೂಮಿ ಪ್ರಾಂತಗಳಲ್ಲಿ ಬೀಡುಬಿಟ್ಟಿರುವ ಹಮಾಸ್ ಹೋರಾಟಗಾರರ ವಿರುದ್ಧ ಹೋರಾಡಲು ಹಾಗೂ ಅವರ ಒತ್ತೆಸೆರೆಯಲ್ಲಿರುವ ನೂರಕ್ಕೂ ಅಧಿಕ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಸಹಸ್ರಾರು ಸೈನಿಕರನ್ನು ನಿಯೋಜಿಸಲಾಗಿದೆಯೆಂದು ಇಸ್ರೇಲ್ ಸೇನೆ ತಿಳಿಸಿದೆ.
‘‘ಇಸ್ರೇಲ್ ನೆಲದಲ್ಲಿರುವ ಪ್ರತಿಯೊಬ್ಬ ಭಯೋತ್ಪಾದಕನನ್ನು ಕೊಲ್ಲುವ ತನಕ ನಾವು ಎಲ್ಲಾ ಪ್ರದೇಶಗಳ ಮೂಲೆಮೂಲೆಗೂ ತಲುಪಲಿದ್ದೇವೆ’’ ಎಂದು ಸೇನಾ ವಕ್ತಾರ ಡೇನಿಯಲ್ ಹಗಾರಿ ತಿಳಿಸಿದ್ದಾರೆ. ‘‘ಮುಂದಿನ 24 ತಾಸುಗಳೊಳಗೆ ಎಲ್ಲಾ ನಿವಾಸಿಗಳನ್ನು ತೆರವುಗೊಳಿಸುವುದು ನಮ್ಮ ಸದ್ಯದ ಗುರಿಯಾಗಿದೆ’’ಎಂದವರು ಹೇಳಿದ್ದಾರೆ. ಹಮಾಸ್ ಹೋರಾಟಗಾರರು ಶನಿವಾರ ನಸುಕಿನಲ್ಲಿ ಏಕಕಾಲದಲ್ಲಿ ದಕ್ಷಿಣ ಇಸ್ರೇಲ್ ಮೇಲೆ ನೆಲ, ಜಲ ಹಾಗೂ ವಾಯುಮಾರ್ಗವಾಗಿ ರಾಕೆಟ್ಗಳು ಹಾಗೂ ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಘಟನೆಯಲ್ಲಿ ಇಸ್ರೇಲಿ ಸೈನಿಕರು ಹಾಗೂ ನಾಗರಿಕರು ಸೇರಿದಂತೆ 600ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು ಹಾಗೂ 1,700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಈ ನಡುವೆ ಹಮಾಸ್ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಇಸ್ರೇಲಿ ನಾಗಕರಿಕರನ್ನು ಅಪಹರಿಸಿ ಒತ್ತೆಸೆರೆಯಲ್ಲಿಸಿರುವುದಾಗಿ ವರದಿಾಗಿದೆ.